ಲಂಡನ್: ಬೆಕೆನ್‌ಹ್ಯಾಮ್ ಜಂಕ್ಷನ್ ಬಳಿ ರೈಲು ಪ್ರವೇಶಿಸಿದ ಇಬ್ಬರು ಆಗಂತುಕರು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಮನಸೋಇಚ್ಛೆ ಇರಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂಥ ಕ್ರೂರ ಘಟನೆಗೆ ಲಂಡನ್ ಮೇಯರ್ ಸಾದಿಕ್ ಖಾನ್ ಅವರೇ ಕಾರಣ ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾರ್ಟ್‌ಲ್ಯಾಂಡ್ ಮತ್ತು ಬೆಕನ್‌ಹ್ಯಾಮ್ ನಡುವಿನ ವಿಕ್ಟೋರಿಯಾ ನಿಲ್ದಾಣದ ಬಳಿ ನಡೆದ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಲೆಬಾಳುವ ವಸ್ತುಗಳೊಂದಿಗೆ ಜನರು ಲಂಡನ್ ನಗರದಲ್ಲಿ ಮುಕ್ತವಾಗಿ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ಗಲಭೆ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಲಂಡನ್‌ನಲ್ಲೇ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಒಂದು ಕಾಲದಲ್ಲಿ ಅದ್ಭುತ ನಗರವಾಗಿದ್ದ ಲಂಡನ್, ಈಗ ಇದೊಂದು ಆತಂಕಕಾರಿ ನಗರವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡ ತಮ್ಮ ಮತ್ತೊಂದು ಸಂದೇಶದಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್ ವಿರುದ್ಧ ಕಿಡಿಯಾಡಿದ್ದಾರೆ. ‘ತಮ್ಮ ಆಡಳಿತ ವೈಫಲ್ಯದಿಂದಾಗಿ ಇಂದು ಇಂಥ ಸ್ಥಿತಿ ನಿರ್ಮಾಣವಾಗಿದೆ. ತಮ್ಮನ್ನೇ ರಕ್ಷಿಸಿಕೊಳ್ಳಲಾರದವರಾಗಿದ್ದಾರೆ. ಇಂಥ ಭೀತಿಯ ವಾತಾವರಣ ಸೃಷ್ಟಿಯಾಗಿ ಕೆಲ ವರ್ಷಗಳೇ ಕಳೆಯಿತು. ಇವೆಲ್ಲವೂ ಸಾದಿಕ್ ಅವರ ಕಾಲಘಟ್ಟದ ಕೊಡುಗೆಯೇ ಆಗಿದೆ. ದೊಡ್ಡ ನಾಯಕರು ಏನೂ ಮಾಡರು ಎಂಬ ಸತ್ಯವನ್ನು ನಾವೆಲ್ಲರೂ ಬಲ್ಲೆವು’ ಎಂದು ಪೀಟರ್ಸ್‌ನ್ ಹೇಳಿದ್ದಾರೆ.
ಕೆವಿನ್ ಪೀಟರ್ಸನ್ ಅವರು ಸದ್ಯ ಐಪಿಎಲ್ ಪಂದ್ಯ ವೀಕ್ಷಕ ವಿವರಣೆಗಾರರಾಗಿ ಪಾಲ್ಗೊಂಡಿದ್ದು, ಭಾರತ ಪ್ರವಾಸದಲ್ಲಿದ್ದಾರೆ. 43 ವರ್ಷದ ಈ ಕ್ರಿಕಟಿಗ 2018ರಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್‌ನಲ್ಲಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಇಂಗ್ಲೆಂಡ್ ತಂಡದ ಪರವಾಗಿ ಒಟ್ಟು 13,779 ರನ್ ಗಳಿಸಿರುವ ಪೀಟರ್ಸನ್ ಅವರು 32 ಶತಕ ಹಾಗೂ 67 ಅರ್ಧ ಶತಕ ಗಳಿಸಿದ್ದಾರೆ. 275 ಪಂದ್ಯಗಳನ್ನು ಆಡಿ ಶೇ 44.3 ಸರಾಸರಿ ಹೊಂದಿದ್ದಾರೆ.
ಲಖನೌ ಮೂಲದವರಾದ ಸಾದಿಕ್ ಖಾನ್ ಅವರು 1968ರಲ್ಲೇ ಲಂಡನ್‌ಗೆ ವಲಸೆ ಬಂದವರು. ಇವರ ಪೂರ್ವಿಕರಲ್ಲಿ ಹಲವರು 1947ರಲ್ಲಿ ಲಖನೌದಿಂದ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡರು.
ಟೂಟಿಂಗ್ ಕ್ಷೇತ್ರವನ್ನು ಪ್ರತಿನಿಧಿಸುವ ಸಾದಿಕ್, 2005ರಲ್ಲಿ ಲಂಡನ್ ಸಂಸತ್ತಿಗೆ ಆಯ್ಕೆಯಾದರು. 2016ರಲ್ಲಿ ಮೇಯರ್ ಆಗಿ ಆಯ್ಕೆಯಾದ ನಂತರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಲಸಿಗರಿಗೆ ತೀವ್ರವಾಗಿ ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಸಾದಿಕ್ ಮೇಲೆ ನಿರಂತರವಾಗಿ ಕೇಳಿಬರುತ್ತಿದೆ. ದ್ವೇಷ ಕುರಿತ ಆರೋಪ ಪ್ರಕರಣಗಳು ಶೇ 1,350ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.