ಕೊಲಂಬೊ: ಶ್ರೀಲಂಕಾದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಮಾಜಿ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರು ಹಿಂಸೆಯನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಅವರ ಬಂಧಕ್ಕೆ ಆಗ್ರಹಿಸಿವೆ.
ದ್ವೀಪ ರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಹಿಂದಾ ರಾಜಪಕ್ಸ ಬೆಂಬಲಿಗರು ಸೋಮವಾರ ರಾತ್ರಿ ದಾಳಿ ನಡೆಸಿದರು. ಇದು, ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಒಬ್ಬ ಸಂಸದ ಸೇರಿದಂತೆ ಒಟ್ಟು 8 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಮಹಿಂದಾ ರಾಜಪಕ್ಸ ಅವರ ಆಡಳಿತಾವಧಿಯಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ ಕಾರಣ, ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಅವರು ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಅವರ ಬೆಂಬಲಿಗರು ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮೇಲೆ ದಾಳಿ ಮಾಡಲಾರಂಭಿಸಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದು, ರಾಜಧಾನಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ.
ಪ್ರಧಾನ ಮಂತ್ರಿಯ ರಾಜೀನಾಮೆಯ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ವಿಸರ್ಜನೆಗೊಂಡಿದೆ. ಪ್ರಸ್ತುತ ದೇಶದ ಚುಕ್ಕಾಣಿ ಮಹಿಂದಾ ರಾಜಪಕ್ಸ ಅವರ ತಮ್ಮ, ಅಧ್ಯಕ್ಷ ಗೊಟಬಯ ರಾಜಪಕ್ಸ ಕೈ ಸೇರಿದೆ.
ಮಹಿಂದಾ ರಾಜಪಕ್ಸ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಪ್ರಚೋದನಕಾರಿಯಾಗಿ ಮಾತನಾಡಿದ್ದರು. ಈ ಮೂಲಕ ರಾಜೀನಾಮೆಯ ಆಗ್ರಹಗಳನ್ನು ಮಣಿಸಲು ಪ್ರಯತ್ನಿಸಿದ್ದರು. ಅವರ ಮಾತುಗಳು ಹಿಂಸೆಯನ್ನು ಪ್ರಚೋದಿಸಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
‘ರಾಜಪಕ್ಸ (ಮಹಿಂದ) ಅವರನ್ನು ಬಂಧಿಸಿ ಕಾನೂನಿನ ಮುಂದೆ ನಿಲ್ಲಿಸಬೇಕು’ ಎಂದು ತಮಿಳಿಗ ಸಂಸದ ಎಂ ಎ ಸುಮಂತ್ರನ್ ಆಗ್ರಹಿಸಿದ್ದಾರೆ.
ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಪ್ರಮುಖ ಪ್ರತಿಪಕ್ಷ ‘ಸಮಗಿ ಜನ ಬಲವೇಗಯ’ ಪಕ್ಷದ ನಾಯಕ ರಂಜಿತ್ ಮದ್ದುಮ ಬಂಡಾರ ಅವರೂ ರಾಜಪಕ್ಸ ಬಂಧಕ್ಕೆ ಆಗ್ರಹಿಸಿದ್ದಾರೆ.
‘ಹಿಂಸೆ ಪ್ರಚೋದಿಸಿದ ಕಾರಣಕ್ಕಾಗಿ ಅವರನ್ನು ಬಂಧಿಸಬೇಕು. ಯಾವುದೇ ಕಾರಣವಿಲ್ಲದೇ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಲಾಗಿದೆ’ ಎಂದು ಮಾಜಿ ಅಧ್ಯಕ್ಷ ಸಿರಿಸೇನಾ ಹೇಳಿದ್ದಾರೆ.
ಸೋಮವಾರ ಸಂಜೆಯಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೆ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ. 217 ಜನರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆ ತಿಳಿಸಿದೆ.
ರಾಜಪಕ್ಸ ಬೆಂಬಲಿಗರಿಂದ ಹಲ್ಲೆಗೊಳಗಾದ ಪ್ರತಿಭಟನಾಕಾರರೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ರಾಜೀನಾಮೆಯ ಮೂಲಕ ಅಧ್ಯಕ್ಷರಿಗೆ ಹಾದಿ ಸುಗಮ ಮಾಡಿಕೊಡುತ್ತಿರುವುದಾಗಿ ಮಹಿಂದಾ ರಾಜಪಕ್ಸ ಸೋಮವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.