ದುಬೈ: ಸಹಿಷ್ಣುತೆ, ಶಾಂತಿ ಮತ್ತು ಸೌಹಾರ್ದ ಸಂದೇಶವನ್ನು ಸಾರುವ ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪದ ವಿನ್ಯಾಸವನ್ನೊಳಗೊಂಡ ಭವ್ಯವಾದ ಹಿಂದೂ ದೇವಾಲಯವನ್ನು ಇಲ್ಲಿನ ಜೆಬೆಲ್ ಅಲಿ ಗ್ರಾಮದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ‘ಆರಾಧನಾ ಗ್ರಾಮ’ವೆಂದೇ ಕರೆಯಲಾಗುವ ಈ ಗ್ರಾಮದಲ್ಲಿ ನೂತನ ದೇವಾಲಯವನ್ನು ಯುಎಇನ ಭಕ್ತರಿಗಾಗಿ ತೆರೆಯಲಾಗಿದೆ.
‘ಸಂಸ್ಕೃತಿ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮತ್ತು ಭಾರತೀಯ ರಾಯಭಾರಿ ಸಂಜಯ್ ಸುಧೀರ್ ದುಬೈನಲ್ಲಿ ನೂತನ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಯಭಾರಿ ಸಂಜಯ್ ಅವರು ಸಂಯುಕ್ತ ಅರಬ್ ಒಕ್ಕೂಟದಲ್ಲಿರುವ 30.5ಲಕ್ಷ ಭಾರತೀಯ ವಲಸಿಗರಿಗೆ ನೀಡಿದ ಬೆಂಬಲಕ್ಕಾಗಿ ಯುಎಇ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು’ ಎಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.
‘ದುಬೈನ ನೂತನ ಹಿಂದೂ ದೇವಾಲಯದ ಉದ್ಘಾಟನೆಯ ಮೂಲಕ ವಿವಿಧ ಧರ್ಮಗಳ ಜನರನ್ನು ಒಗ್ಗೂಡಿಸುವ ಶಾಂತಿ, ಸಹಬಾಳ್ವೆಯ ಸಂದೇಶವನ್ನು ಒಳಗೊಂಡಿದೆ’ ಎಂದು ‘ಖಲೀಜ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ದೇವಾಲಯದೊಳಗೆ ಭಕ್ತರು ಪ್ರವೇಶಿಸುತ್ತಿದ್ದಂತೆಯೇ ಅರ್ಚಕರು ಓಂ ಶಾಂತಿ ಶಾಂತಿ ಓಂ ಮಂತ್ರವನ್ನು ಪಠಿಸಿದರು. ಸಂಗೀತಗಾರರು ತಬಲಾ ಮತ್ತು ಢೋಲ್ ಸಂಗೀತದ ಮೂಲಕ ಸ್ವಾಗತಿಸಿದರು.
ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಯಭಾರಿ ಕಚೇರಿಗಳ ಮುಖ್ಯಸ್ಥರು, ವಿವಿಧ ಧಾರ್ಮಿಕ ಮುಖಂಡರು, ಉದ್ಯಮಿಗಳು ಮತ್ತು ಭಾರತೀಯ ಸಮುದಾಯದ ಮುಖಂಡರು ಮತ್ತು ಇತರ ಗಣ್ಯರು ಸೇರಿದಂತೆ ಸುಮಾರು 200 ಮಂದಿ ಪಾಲ್ಗೊಂಡಿದ್ದರು.
ಜೆಬೆಲ್ ಅಲಿಯಲ್ಲಿರುವ ‘ಆರಾಧನಾ ಗ್ರಾಮ’ ಈಗ ಒಂಬತ್ತು ಧಾರ್ಮಿಕ ದೇವಾಲಯಗಳನ್ನು ಹೊಂದಿದೆ, ಇದರಲ್ಲಿ ಏಳು ಚರ್ಚುಗಳು, ಗುರು ನಾನಕ್ ದರ್ಬಾರ್, ಸಿಖ್ ಗುರುದ್ವಾರ ಮತ್ತು ಹೊಸ ಹಿಂದೂ ಪೂಜಾ ಮಂದಿರಗಳು ಸೇರಿವೆ.
70 ಸಾವಿರ ಚದರ ಅಡಿ ವಿಶಾಲವುಳ್ಳ ನೂತನ ಹಿಂದೂ ದೇವಾಲಯದ ನಿರ್ಮಾಣವನ್ನು 2020ರಲ್ಲಿ ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ನಡುವೆಯೂ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ದೇವಾಲಯದಲ್ಲಿ ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪದ ಕೆತ್ತನೆಯಿದ್ದು, ಅಲಂಕೃತ ಕಂಬಗಳು, ಹಿತ್ತಾಳೆಯ ಗೋಪುರಗಳು ಇವೆ.
ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬೇಕು. ವರ್ಷಾಂತ್ಯದ ವೇಳೆಗೆ ಹಿಂದೂ ಧಾರ್ಮಿಕ ಆಚರಣೆಗಳು, ವಿವಾಹ, ಸಾಮೂಹಿಕ ಪ್ರಾರ್ಥನೆಗೆ ಅನುಕೂಲವಾಗುವಂಥ ವಿಶಾಲವಾದ ಸಮುದಾಯ ಕೇಂದ್ರವನ್ನೂ ಇಲ್ಲಿ ನಿರ್ಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.