ಬಿಯರಿಟ್ಜ್ (ಫ್ರಾನ್ಸ್): ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಏಳು ಆರ್ಥಿಕ ಶ್ರೀಮಂತ ರಾಷ್ಟ್ರಗಳ ನಾಯಕರು ಆಗಮಿಸುತ್ತಿದ್ದರೆ, ಇತ್ತ ಜಿ–7 ವಿರೋಧಿಸುವ 15 ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ಫ್ರಾನ್ಸ್–ಸ್ಪೇನ್ ಗಡಿಯಲ್ಲಿ ಶನಿವಾರ ಬೃಹತ್ ರ್‍ಯಾಲಿ ನಡೆಸಿದರು.
ಬಂಡವಾಳಶಾಹಿ ವಿರೋಧಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು ಹಾಗೂ ಫ್ರಾನ್ಸ್ ಸರ್ಕಾರದ ವಿರೋಧಿ ಪಡೆ ‘ಯೆಲ್ಲೊ ವೆಸ್ಟ್’ನ ಸದಸ್ಯರು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.
‘ನಾಯಕರೇ: ಅಮೆಜಾನ್ ಕಾಡು ಹೊತ್ತಿ ಉರಿಯುತ್ತಿದೆ, ಕ್ರಮ ಕೈಗೊಳ್ಳಿ’ ಎನ್ನುವ ಭಿತ್ತಿಪತ್ರ ರ್‍ಯಾಲಿಯಲ್ಲಿ ಕಂಡುಬಂದಿತು.
ಶೃಂಗಸಭೆಯ ಅಧಿಕೃತ ಆರಂಭಕ್ಕೂ ಕೆಲವೇ ತಾಸು ಮೊದಲು, ದೇಶವನ್ನು ಉದ್ದೇಶಿಸಿ ಮಾತನಾಡಿದಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಅವರು ‘ಶಾಂತಿ ಮತ್ತು ಒಗ್ಗಟ್ಟಿಗೆ ಕರೆ ನೀಡಲು ಬಯಸುತ್ತೇನೆ’ ಎಂದು ಹೇಳಿದರು.
ನಾವು ಒಗ್ಗಟ್ಟಾಗದೆ ಇದ್ದರೆ, ದೊಡ್ಡ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
‘ವಾಣಿಜ್ಯಿಕ ಬಿಕ್ಕಟ್ಟುಗಳು ಎಲ್ಲರಿಗೂ ಕೆಡುಕು ಉಂಟು ಮಾಡುತ್ತವೆ. ಇದನ್ನು ಜಿ–7 ಸಹಭಾಗಿ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವುದು ನನ್ನ ಗುರಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.