ಲಂಡನ್: ಇತ್ತೀಚೆಗಷ್ಟೇ ತಮ್ಮ ಮದುವೆ ಮೂಲಕ ದೊಡ್ಡ ಸುದ್ದಿಯಾಗಿರುವನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ಅವರು ಅದೇ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.
ಈ ಬಗ್ಗೆ ಮೌನ ಮುರಿದಿರುವ ಮಲಾಲಾ, ನಾನು ಎಂದಿಗೂ ಮದುವೆ ವಿರೋಧಿಯಾಗಿರಲಿಲ್ಲ. ಆದರೆ, ಮದುವೆಯ ಕಾಳಜಿ ಎಂಥದ್ದಾಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದೇ ಎಂದು ಉತ್ತರಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಮಲಾಲಾ ‘ವೋಜ್’ ನಿಯತಕಾಲಿಕೆಯ ಸಂದರ್ಶನದಲ್ಲಿ ಮದುವೆ ಬಗ್ಗೆ ಹೇಳಿಕೆ ನೀಡಿದ್ದರು. ‘ಜನ ಏಕೆ ಮದುವೆಯಾಗುತ್ತಾರೆ ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ನಿಮಗೆ ಜೀವನ ಸಂಗಾತಿ ಬೇಕಾದರೆ ಪೇಪರ್‌ಗಳಿಗೆ ಏಕೆ ಸಹಿ ಮಾಡುತ್ತೀರಾ? ಪರಸ್ಪರ ಒಟ್ಟಾಗಿದ್ದರೆ ಮುಗಿಯಿತು‘ ಎಂದು ಮದುವೆಯ ಬಗ್ಗೆ ಕೊಂಕು ಮಾತನಾಡಿದ್ದರು.
ಆದರೆ, ಹೀಗೆ ಹೇಳಿಕೆ ನೀಡಿದ ಕೆಲವೇ ತಿಂಗಳಲ್ಲಿಮಲಾಲಾ ಅವರು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನಲ್ಲಿ (ಪಿಸಿಬಿ) ಕೆಲಸ ಮಾಡುವ ಅಸರ್ ಮಲಿಕ್ ಅವರನ್ನುನ.9 ರಂದು ಮದುವೆಯಾಗಿದ್ದರು. ಹೀಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಈ ಬಗ್ಗೆ ಬಿಬಿಸಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಮದುವೆಯ ವಿರೋಧಿಯಾಗಿರಲಿಲ್ಲ. ನನ್ನ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳಿ. ಅದೃಷ್ಟವಶಾತ್ ನಾನು ಕಾಪಾಡಿಕೊಂಡು ಬಂದಿರುವ ಮೌಲ್ಯಗಳನ್ನು ಗೌರವಿಸುವ ಹುಡುಗನನಗೆ ಸಿಕ್ಕಿದ್ದಾನೆ. ಸಾಕಷ್ಟು ವಿಷಯಗಳಲ್ಲಿ ಅಸರ್ ಹಾಗೂ ನನ್ನ ನಡುವೆ ಹೋಲಿಕೆ ಇದೆ. ಹೀಗಾಗಿ ಮದುವೆಯಾಗಿದ್ದೇನೆ‘ ಎಂದು ಮಲಾಲಾ ಹೇಳಿದ್ದಾರೆ.
ಬ್ರಿಟನ್‌ನ ಬರ್ಮಿಂಗ್‌ಹ್ಯಾಂ ನಗರದ ನಿವಾಸದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮಲಾಲಾ ಹಾಗೂ ಅಸರ್ ವಿವಾಹ ಸಮಾರಂಭ ನಡೆದಿತ್ತು.‘ಇದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸರ್ ಮತ್ತು ನಾನು ವಿವಾಹವಾಗಿದ್ದು, ಜೀವನ ಸಂಗಾತಿಗಳಾಗಿದ್ದೇವೆ. ಬರ್ಮಿಂಗ್‌ಹ್ಯಾಂನ ನಿವಾಸದಲ್ಲಿ ನಮ್ಮ ಕುಟುಂಬದವರ ಉಪಸ್ಥಿತಿಯಲ್ಲಿ ವಿವಾಹ ನೆರವೇರಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ’ ಎಂದು ಮಲಾಲಾ ಟ್ವೀಟ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.