ಲಂಡನ್: ಅಫ್ಗಾನಿಸ್ತಾನದ ಪರಿಸ್ಥಿತಿ, ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆ ವಿಚಾರವಾಗಿ ತೀವ್ರ ಆತಂಕಗೊಂಡಿರುವುದಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫ್‌ಜಾಯ್ ಅವರು ಹೇಳಿದ್ದಾರೆ. ಅಲ್ಲದೆ, ವಿಶ್ವ ನಾಯಕರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ಅಫ್ಗಾನಿಸ್ತಾನದ ಮಹಿಳಾ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ, ಸಾಮಾಜಿಕ ಕಾರ್ಯಕರ್ತರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಮುಂದಿನ ಭವಿಷ್ಯದ ಬಗ್ಗೆ ನಮಗೆ ಖಾತ್ರಿ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು,’ ಮಲಾಲಾ ಹೇಳಿದ್ದಾರೆ.
ಅಫ್ಗನ್ ಜನರ ರಕ್ಷಣೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಡಬೇಕಾದದ್ದು ಬಹಳಷ್ಟಿದೆ. ಅವರು ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮಲಾಲಾ ಆಗ್ರಹಿಸಿದ್ದಾರೆ. ಅಲ್ಲದೇ, ಅಫ್ಗಾನಿಸ್ತಾನದ ವಿಚಾರವಾಗಿ ತಾವು ವಿಶ್ವದ ನಾಯಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವುದಾಗಿ ಅವರು ಹೇಳಿದ್ದಾರೆ.
‘ಇದು ಮಾನವೀಯತೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿ. ನಾವು ನಮ್ಮ ಸಹಾಯ ಮತ್ತು ಬೆಂಬಲವನ್ನು ಈ ಸಂದರ್ಭದಲ್ಲಿ ನೀಡಬೇಕಾಗಿದೆ’ ಎಂದು ಮಲಾಲಾ ಅಂತರರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿಗೆ ತಿಳಿಸಿದ್ದಾರೆ.
ಅಫ್ಗನ್ ನಿರಾಶ್ರಿತರಿಗೆ ಪಾಕಿಸ್ತಾನದಲ್ಲಿ ನೆಲೆ ನೀಡಬೇಕು. ಎಲ್ಲ ನಿರಾಶ್ರಿತ ಮಕ್ಕಳಿಗೆ "ಶಿಕ್ಷಣ, ಸುರಕ್ಷತೆ ಮತ್ತು ರಕ್ಷಣೆ ನೀಡಬೇಕು. ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಮಲಾಲಾ ಯೂಸೂಫ್‌ಜಾಯ್ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಮಹಿಳಾ ಶಿಕ್ಷಣ ನಿರಾಕರಿಸುವುದರ ವಿರುದ್ಧದ ಆಂದೋಲನ ಆರಂಭಿಸಿದ್ದ ಮಲಾಲಾ ಯೂಸೂಫ್ ಜಾಯ್‌ಗೆ 2012ರಲ್ಲಿ ತಾಲಿಬಾನ್ ಉಗ್ರರಿಂದ ಗುಂಡೇಟು ಬಿದ್ದಿತ್ತು. ಗುಂಡೇಟಿನ ನಂತರ ಇಂಗ್ಲೆಂಡ್‌ಗೆ ತೆರಳಿದ ಮಲಾಲಾ, ಅಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಗುಣಮುಖರಾದರು. ಈ ಮಧ್ಯೆ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯೂ ಸಿಕ್ಕಿತ್ತು. ಕಳೆದ ವರ್ಷ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.