ಬ್ಲಾಂಟೈರ್ (ಮಲಾವಿ): ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಜನರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಅವರು ಪ್ರಯಾಣಿಸುತ್ತಿದ್ದ ಸೇನಾ ವಿಮಾನದ ಅವಶೇಷಗಳು, ಒಂದು ದಿನಕ್ಕೂ ಹೆಚ್ಚು ಕಾಲ ನಡೆದ ಶೋಧದ ನಂತರ ದೇಶದ ಉತ್ತರದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಮಲಾವಿ ಅಧ್ಯಕ್ಷ ಲಾಜರಸ್ ಚಕ್ವೆರಾ ಅವರು ತಿಳಿಸಿದ್ದಾರೆ.
ಆಫ್ರಿಕಾದ ಆಗ್ನೇಯ ಭಾಗದ ರಾಷ್ಟ್ರ ಮಲಾವಿ ರಾಜಧಾನಿ ಲಿಲೋಂಗ್ವೆಯಿಂದ ಮುಜು ನಗರಕ್ಕೆ ವಿಮಾನವು ಸೋಮವಾರ ಬೆಳಿಗ್ಗೆ ಹೊರಟಿತ್ತು. 45 ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಬೇಕಿದ್ದ ಈ ವಿಮಾನ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿತ್ತು. ಚಿಲಿಮಾ ಅವರು ಈ ವಿಮಾನದಲ್ಲಿದ್ದರು. ಕಣ್ಮರೆಯಾದ ವಿಮಾನದ ಪತ್ತೆಗೆ ನೂರಾರು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದರು.
ಪ್ರತಿಕೂಲ ಹವಾಮಾನದಿಂದಾಗಿ ಮುಜು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸದಂತೆ ಪೈಲಟ್‌ಗಳಿಗೆ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ಮಾಹಿತಿ ನೀಡಿದರು. ಲಿಲೋಂಗ್ವೆಗೆ ಹಿಂತಿರುಗುವಂತೆ ಸೂಚಿಸಿದರು. ನಂತರ ಏರ್ ಟ್ರಾಫಿಕ್ ಕಂಟ್ರೋಲ್ ವಿಮಾನದ ಸಂಪರ್ಕ ಕಳೆದುಕೊಂಡಿತು. ಅದು ರೇಡಾರ್ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಯಿತು ಎಂದು ಚಕ್ವೆರಾ ಹೇಳಿದ್ದಾರೆ.
ವಿಮಾನದಲ್ಲಿ ಏಳು ಪ್ರಯಾಣಿಕರು ಮತ್ತು ಮೂವರು ಸೇನಾ ಸಿಬ್ಬಂದಿಯೂ ಇದ್ದರು. ದೇಶದ ಸಶಸ್ತ್ರ ಪಡೆಗಳಿಂದ ನಿರ್ವಹಿಸುವ ಸಣ್ಣ, ಪ್ರೊಪೆಲ್ಲರ್ ಚಾಲಿತ ವಿಮಾನ ಇದಾಗಿತ್ತು ಎಂದು ಚಕ್ವೆರಾ ಹೇಳಿದ್ದಾರೆ.
ವಿಮಾನದ ಮಾಹಿತಿ ಟ್ರ್ಯಾಕ್ ಮಾಡುವ ಸಿಎಚ್– ಏವಿಯೇಷನ್ ವೆಬ್‌ಸೈಟ್ ಪ್ರಕಾರ, ವಿಮಾನದ ಟೈಲ್ ಸಂಖ್ಯೆಯು ಇದು ಡಾರ್ನಿಯರ್ 228-ಮಾದರಿಯ ಅವಳಿ ಪ್ರೊಪೆಲ್ಲರ್ ವಿಮಾನ. ಇದನ್ನು 1988ರಲ್ಲಿ ಮಲಾವಿಯ ಸೇನೆಗೆ ನೀಡಲಾಗಿತ್ತು.
ಚಿಲಿಮಾ ಅವರು ಎರಡನೇ ಅವಧಿಗೆ ಮಲಾವಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2014-2019 ರವರೆಗೆ ಪೀಟರ್ ಮುತಾರಿಕಾ ಅವರು ಅಧ್ಯಕ್ಷರಾಗಿದ್ದಾಗಲೂ ಚಿಲಿಮಾ ಉಪಾಧ್ಯಕ್ಷರಾಗಿದ್ದರು. 2019ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೂರನೇ ಸ್ಥಾನ ಪಡೆದಿದ್ದರು. ಈ ಚುನಾವಣೆಯಲ್ಲಿ ಮುತಾರಿಕ ಮೊದಲ ಸ್ಥಾನ ಮತ್ತು ಚಕ್ವೇರಾ ಎರಡನೇ ಸ್ಥಾನ ಪಡೆದಿದ್ದರು. ಅಕ್ರಮಗಳ ಕಾರಣದಿಂದಾಗಿ ಮಲಾವಿಯ ನ್ಯಾಯಾಲಯವು ಈ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿತು. ಆಗ ಚಿಲಿಮಾ ಅವರು ಚಕ್ವೇರಾ ಅವರ ಜತೆ ಗುರುತಿಸಿಕೊಂಡರು. ಚಕ್ವೇರಾ 2020ರ ಚುನಾವಣೆಯಲ್ಲಿ ಮರು ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.