ಮಾಲೆ: ‘ಮಾಲ್ದೀವ್ಸ್ ಸಣ್ಣ ರಾಷ್ಟ್ರ ಇರಬಹುದು. ಆದರೆ ನಮ್ಮನ್ನು ಬೆದರಿಸಲು ಯಾರೂ ಪರವಾನಗಿ ನೀಡಿಲ್ಲ’ ಎಂದು ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಜು ಗುಡುಗಿದ್ದಾರೆ.
ಐದು ದಿನಗಳ ಚೀನಾ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳಿದ ಅವರು, ಯಾವ ದೇಶದ ಹೆಸರನ್ನೂ ಹೇಳದೆ ಈ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಹೇಳಿಕೆ ನೀಡಿದ ಮೂರು ಸಚಿವರನ್ನು ಮಾಲ್ದೀವ್ಸ್ ವಜಾಗೊಳಿಸಿತ್ತು.
‘ಸಾಗರದ ತಟದಲ್ಲಿರುವ ನಮ್ಮದ್ದು ಪುಟ್ಟ ದ್ವೀಪರಾಷ್ಟ್ರ. ಆದರೆ 9 ಲಕ್ಷ ಚದರ ಕಿ.ಮೀ. ವಿಸ್ತಾರವಾದ ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರದ ಅತ್ಯಂತ ಹೆಚ್ಚಿನ ಜಾಗವನ್ನು ಮಾಲ್ದೀವ್ಸ್ ಹೊಂದಿದೆ. ಈ ಮಹಾಸಾಗರ ಯಾವ ಒಂದು ರಾಷ್ಟ್ರದ ಸ್ವತ್ತಲ್ಲ. ನಾವು ಯಾರ ಹಂಗಿನಲ್ಲೂ ಇಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರ’ ಎಂದಿದ್ದಾರೆ.
ಇತ್ತೀಚೆಗೆ ಚೀನಾಗೆ 5 ದಿನಗಳ ಭೇಟಿ ನೀಡಿದ್ದ ಅಧ್ಯಕ್ಷ ಮುಯಿಜು, 20 ಒಪ್ಪಂದಗಳಿಗೆ ಚೀನಾದೊಂದಿಗೆ ಸಹಿ ಹಾಕಿದ್ದಾರೆ.
‘ಮಾಲ್ದೀವ್ಸ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ ಹಾಗೂ ರಾಷ್ಟ್ರದ ಘನತೆ ಕಾಪಾಡುವ ನಿಟ್ಟಿನಲ್ಲಿ ಮಾಲ್ದೀವ್ಸ್ ನೆರವಿಗೆ ನಿಲ್ಲಲು ಚೀನಾ ಭರವಸೆ ನೀಡಿದೆ’ ಎಂದು ಮುಯಿಜು ಮಾಧ್ಯಮಗಳಿಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.