ADVERTISEMENT

ಭಾರತೀಯ ಸೇನೆ ವಾಪಾಸ್‌ಗೆ ಸೂಚಿಸಿ, ಸೇನಾ ಬಲ ಹೆಚ್ಚಳಕ್ಕೆ ಮಾಲ್ದೀವ್ಸ್‌ ಒತ್ತು

ಏಜೆನ್ಸೀಸ್
Published 5 ಫೆಬ್ರುವರಿ 2024, 12:57 IST
Last Updated 5 ಫೆಬ್ರುವರಿ 2024, 12:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾಲೆ: ತನ್ನ ದ್ವೀಪಸಮೂಹದಿಂದ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ, ತನ್ನ ನೆಲೆಯ ರಕ್ಷಣೆಗಾಗಿ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವತ್ತ ಮಾಲ್ದೀವ್ಸ್‌ ರಕ್ಷಣಾತ್ಮಕ ನಡೆಯನ್ನು ಮುಂದಿಟ್ಟಿದೆ.

ಈ ಕುರಿತು ಮಾಲ್ದೀವ್ಸ್ ಲೋಕಸಭೆಯಲ್ಲಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಮೊಹಮ್ಮದ್ ಮುಯಿ‌ಜು, ‘ಸಾಮಾನ್ಯ ಎಂಬಂತಿದ್ದ ಮಾಲ್ದೀವಿಯನ್ ನ್ಯಾಷನಲ್‌ ಡಿಫೆನ್ಸ್ ಫೋರ್ಸ್‌ ಅನ್ನು ಅತ್ಯಾಧುನಿಕ ಮಿಲಿಟರಿ ಸಾಮರ್ಥ್ಯದ ಕಡಲು ಕಣ್ಗಾವಲು ಪಡೆಯನ್ನಾಗಿ ಮಾರ್ಪಡಿಸಲಿದ್ದು, ಇದು ಜಾಗತಿಕ ಹಡಗು ಮಾರ್ಗದ ಮೇಲೆ ಕಣ್ಣಿಡಲಿದೆ’ ಎಂದಿದ್ದಾರೆ.

ADVERTISEMENT

‘ಭಾರತವು ಮಾರ್ಚ್ 10ರಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಆರಂಭಿಸಲಿದೆ. ಈ ಪ್ರಕ್ರಿಯೆ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಮುಯಿಜು ಹೇಳಿದ್ದಾರೆ.

ಹಿಂದೂಮಹಾಸಾಗರ ಸುತ್ತಲಿನ ಕಡಲ ಪ್ರದೇಶಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಭಾರತದ ಪ್ರಯತ್ನಕ್ಕೆ ವಿರುದ್ಧವಾಗಿ, ಮಾಲ್ದೀವ್ಸ್‌ ಚೀನಾದ ಗೆಳೆತನ ಬಯಸಿದೆ. ಇದರ ಭಾಗವಾಗಿಯೇ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುಂತೆ ಮುಯಿಜು ಸೂಚಿಸಿದ್ದಾರೆ.

‘ದೇಶದ ರಸ್ತೆ, ಜಲ ಹಾಗೂ ವಾಯು ಮಾರ್ಗವನ್ನು ಸಮರ್ಥವಾಗಿ ರಕ್ಷಿಸುವ ಸಾಮರ್ಥ್ಯ ಆಧುನಿಕ ಸೇನೆಗೆ ಇರುವಂತೆ ಶಕ್ತಿಯುತವನ್ನಾಗಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಈ ಸೇನೆಯು ದೇಶದ ವಿಶೇಷ ಆರ್ಥಿಕ ವಲಯವಾದ 9 ಲಕ್ಷ ಚದರ ಕಿಲೋಮೀಟರ್ ಮೇಲೆ ನಿರಂತರ ಕಣ್ಗಾವಲು ಇಡಲಿದೆ’ ಎಂದಿದ್ದಾರೆ.

‘ಭಾರತೀಯ ಕಡಲು ಪಡೆಯು ಕಳೆದ ವಾರ ವಿಶೇಷ ಆರ್ಥಿಕ ವಲಯದ ಉತ್ತರ ಭಾಗವನ್ನು ಪ್ರವೇಶಿಸಿದ್ದು, ಮಾಲ್ದೀವ್ಸ್‌ನ ಮೂರು ಮೀನುಗಾರರ ಹಡಗುಗಳನ್ನು ಬೆದರಿಸಿದೆ. ಮಾಲ್ದೀವ್ಸ್‌ನ 1,192 ಹವಳಯುಕ್ತ ದ್ವೀಪಗಳ ಹೈಡ್ರೊಗ್ರಾಫಿಕ್ ಜಂಟಿ ಸಮೀಕ್ಷೆ ನಡೆಸುವ ಭಾರತದೊಂದಿಗಿನ 2019ರ ಒಪ್ಪಂದವನ್ನು ಮಾಲ್ದೀವ್ಸ್ ಮುಂದುವರಿಸುವುದಿಲ್ಲ. ದೇಶದ ಕಡಲು ಹಾಗೂ ತೀರದ ನಕ್ಷೆ ಸಿದ್ಧಪಡಿಸುವ ಅಧಿಕಾರವನ್ನು ವಿದೇಶಕ್ಕೆ ನೀಡುವುದಿಲ್ಲ’ ಎಂದಿದ್ದಾರೆ.

ಸಮಭಾಜಕ ವೃತ್ತದಲ್ಲಿ 800 ಕಿ.ಮೀ. ಭೂಪ್ರದೇಶವನ್ನು ಮಾಲ್ದೀವ್ಸ್ ಹೊಂದಿದೆ. ಹೀಗಾಗಿ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದುಬಾರಿಯ ಪ್ರವಾಸಿ ತಾಣವೆನಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಮಾಲ್ದೀವ್ಸ್‌ನ ಮೂವರು ಸಚಿವರ ಹೇಳಿಕೆ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ಇದರಿಂದಾಗಿ ಭಾರತದ ಪ್ರವಾಸೋದ್ಯಮ ಕೇಂದ್ರಗಳು ಮಾಲ್ದೀವ್ಸ್‌ಗೆ ಕಾಯ್ದಿರಿಸಲಾದ ಟಿಕೆಟ್‌ಗಳನ್ನು ರದ್ದುಪಡಿಸಿತು. ಜತೆಗೆ ದೇಶದಲ್ಲೇ ಇರುವ ಪ್ರವಾಸಿ ತಾಣಗಳನ್ನು ಉತ್ತೇಜಿಸುವ ಅಭಿಯಾನಗಳೂ ಭಾರತದಲ್ಲಿ ಆರಂಭವಾದವು.

ಮಾಲ್ದೀವ್ಸ್‌ನ ಆರ್ಥಿಕತೆಗೆ ಪ್ರವಾಸೋದ್ಯಮ ಗಣನೀಯ ಕೊಡುಗೆ ನೀಡುತ್ತಿದ್ದು, ಇದು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರಲ್ಲಿ ಭಾರತೀಯರ ಪಾಲೇ ಹೆಚ್ಚು ಎಂದು ದಾಖಲೆಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.