ಪ್ಯಾರಿಸ್: ಮಾರಕಾಸ್ತ್ರದಿಂದ ಬೆದರಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಫ್ರಾನ್ಸ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಬೆಳಗ್ಗೆ ಇಲ್ಲಿಗೆ ಸಮೀಪದಬಿಸಿನೆಸ್ ಸೆಂಟರ್ ಬಳಿ ಪೊಲೀಸರತ್ತ ಧಾವಿಸುತ್ತಿದ್ದ ವ್ಯಕ್ತಿತನ್ನ ಬಳಿ ಇದ್ದ ಮಾರಕಾಸ್ತ್ರದಿಂದ ಬೆದರಿಸುತ್ತಿದ್ದ. ಈತನ ಚಲನವಲನಗಳನ್ನು ಕಂಡ ಪೊಲೀಸರು ಕೂಡಲೆ ಶರಣಾಗುವಂತೆ ತಾಕೀತು ಮಾಡಿದರು. ಆದರೆ, ಆತ ತನ್ನ ಬಳಿ ಇದ್ದ ಮಾರಕಾಸ್ತ್ರದ ಸಹಿತ ಅಧಿಕಾರಿಗಳತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.ಪರಿಣಾಮ ಗುಂಡು ಆತನ ಎದೆ ಹಾಗೂ ಕಾಲಿನ ಭಾಗಕ್ಕೆ ತಗುಲಿ ಮೃತಪಟ್ಟಿರುವುದಾಗಿ ಎಎಫ್‌ಪಿ ವರದಿ ಮಾಡಿವೆ.
ಆತನ ಗುರುತು ಮತ್ತು ಇತರೆ ವಿವರಗಳನ್ನು ಪೊಲೀಸರು ಗೌಪ್ಯವಾಗಿ ಇರಿಸಿದ್ದಾರೆ. ಆತನಿಂದ ಯಾರಿಗೂ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಆತ ಆಯುಧ ಮಾದರಿ ಹೋಲುವ ಅಸ್ತ್ರದಿಂದ ಬೆದರಿಕೆ ಹಾಕುತ್ತಿದ್ದ. ಇದರಿಂದಾಗಿ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆ ಪರಿಣಾಮ ಬಿಸಿನೆಸ್ ಸೆಂಟರ್ ಸುತ್ತಮುತ್ತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಹೈ ಅಲರ್ಟ್ ಘೋಷಿಸಿದ್ದಾರೆ. ಪ್ಯಾರಿಸ್‌ನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, 2015ರಿಂದ ಇಲ್ಲಿಯವರೆಗೆ ಸುಮಾರು 255 ಮಂದಿ ಮೃತಪಟ್ಟಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಪ್ಯಾರಿಸ್ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಆಡಳಿತ ವಿಭಾಗದ ಏಜೆಂಟನೊಬ್ಬ ನಾಲ್ಕು ಮಂದಿ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದ. ನಂತರ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದಾಗ ಆತ ಮೃತಪಟ್ಟಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.