ಟೊಕಿಯೊ: ಹೊಸ ವರ್ಷದ ಮೊದಲ ದಿನ ಜಪಾನ್‌ನ ಪಶ್ಚಿಮ ಭಾಗದ ಕರಾವಳಿಯಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ಒಂದು ಬಾರಿ ರಿಕ್ಟರ್ ಮಾಪನದಲ್ಲಿ 7.6ರಷ್ಟು ದಾಖಲಾಗಿದೆ.
ಕಟ್ಟಡಗಳ ಅವಶೇಷಗಳಡಿ ಸಿಲುಕಿ 6ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಶಿಕಾವಾ ಹಾಗೂ ಹೊನ್ಶು ದ್ವೀಪ ಪ್ರದೇಶ ವ್ಯಾಪ್ತಿಗೆ ಅನ್ವಯಿಸಿ ಆರಂಭದಲ್ಲಿ ಸುನಾಮಿಯ ಗಂಭೀರ ಎಚ್ಚರಿಕೆ ನೀಡಿದ್ದ ಜಪಾನ್ ಆಡಳಿತ, ಬಳಿಕ ಹಿಂಪಡೆಯಿತು. ಬೃಹತ್ ಅಲೆ ಅಪ್ಪಳಿಸುವ ಸಾಧ್ಯತೆ ಇದ್ದು, ಕರಾವಳಿ ಭಾಗದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.
ಭೂಕಂಪದಿಂದ ಕೆಲವೆಡೆ ಕಟ್ಟಡಗಳು ಕುಸಿದಿವೆ. ಒಂದೆರಡು ಕಡೆ ಬೆಂಕಿ ಹೊತ್ತಿಕೊಂಡಿದೆ. ಕುಸಿದ ಕಟ್ಟಡಗಳಲ್ಲಿ ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಕರಾವಳಿ ಭಾಗದಲ್ಲಿ ಜನರು ಸುರಕ್ಷಿತ ಸ್ಥಳದತ್ತ ಧಾವಿಸಬೇಕು ಎಂದು ಜಪಾನ್‌ನ ಹವಾಮಾನ ಮುನ್ಸೂಚನೆ ಸಂಸ್ಥೆ ಸಲಹೆ ನೀಡಿದೆ. ರಸ್ತೆಗಳಲ್ಲಿ ಬಿರುಕು ಉಂಟಾಗಿದೆ. ಮುಂದಿನ ಒಂದು ವಾರದ ಮತ್ತೆ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಿದೆ.
ಸರ್ಕಾರದ ವಕ್ತಾರ ಯೊಶಿಮಸಾ ಹಯಾಶಿ ಅವರು, ‘ಈ ವಲಯದಲ್ಲಿರುವ ಅಣುಶಕ್ತಿ ಸ್ಥಾವರಗಳಿಗೆ ಏನು ಧಕ್ಕೆಯಾಗಿಲ್ಲ’ ಎಂದಿದ್ದಾರೆ. ‘ಪ್ರತಿ ನಿಮಿಷವು ಮುಖ್ಯ. ಶೀಘ್ರ ಸುರಕ್ಷಿತ ಸ್ಥಳಗಳತ್ತ ತೆರಳಬೇಕು’ ಎಂದು ನಿವಾಸಿಗಳಿಗೆ ಸಲಹೆ ನೀಡಿದರು.
ಇಶಿಕಾವಾ ವಲಯದ ವಾಜಿಮಾದಲ್ಲಿ ಹೊಗೆ ಮೂಡಿದ್ದ ದೃಶ್ಯಗಳನ್ನು ಸರ್ಕಾರಿ ವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ. ನೀಗಾಟಾ, ಇತರೆಡೆ 10 ಅಡಿ ಎತ್ತರದ ಅಲೆ ಅಪ್ಪಳಿಸಬಹುದು ಎಂದು ವರದಿ ತಿಳಿಸಿದೆ. ಮುಂಜಾಗ್ರತೆಯಾಗಿ ಬುಲೆಟ್ ಟ್ರೈನ್‌ಗಳ ಸಂಚಾರ ನಿಲ್ಲಿಸಲಾಗಿದೆ.
ಪಶ್ಚಿಮ ಕರಾವಳಿಯ ಒಂಬತ್ತು ಪ್ರಾಂತ್ಯಗಳಲ್ಲಿ 97,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಜಪಾನ್ ಸರ್ಕಾರ ಆದೇಶಿಸಿದೆ. ಕ್ರೀಡಾ ಸಭಾಂಗಣಗಳು ಮತ್ತು ಶಾಲಾ ಕೊಠಡಿಗಳನ್ನು ತಾತ್ಕಾಲಿಕ ಶಿಬಿರಗಳಾಗಿ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜಪಾನ್ ಸಾಮಾನ್ಯವಾಗಿ ಭೂಕಂಪನ ಬಾಧಿತ ವಲಯವಾಗಿದೆ. 2011ರ ಮಾರ್ಚ್‌ನಲ್ಲಿ ಭಾರಿ ಭೂಕಂಪನ ಮತ್ತು ಸುನಾಮಿ ಸಂಭವಿಸಿತ್ತು. ಅಣುಶಕ್ತಿ ಸ್ಥಾವರಕ್ಕೂ ಧಕ್ಕೆಯಾಗಿತ್ತು.
ಭೂಕಂಪ ಪೀಡಿತ ಜಪಾನ್‌ಗೆ ಅಗತ್ಯ ನೆರವು ಒದಗಿಸುವುದಾಗಿ ಅಮೆರಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಅಮೆರಿಕ ಮತ್ತು ಜಪಾನ್ ಮಿತ್ರರಾಷ್ಟ್ರಗಳಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಇದೆ. ಈ ಕಷ್ಟದ ಸಮಯದಲ್ಲಿ ಜಪಾನಿನ ಜನರೊಂದಿಗೆ ನಾವು ನಿಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ. ಕ್ವಾಡ್ ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ ಮತ್ತು ಜಪಾನ್ ಪ್ರಮುಖವಾಗಿದೆ.
ಟೊಕಿಯೊ: ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು, ಯಾವುದೇ ಸಹಾಯ ಬಯಸುವ ಭಾರತೀಯರಿಗೆ ನೆರವಾಗಲು ತುರ್ತು ಸಹಾಯವಾಣಿ ಸ್ಥಾಪಿಸಿದೆ. ಜಪಾನ್ ಆಡಳಿತವು ಸುನಾಮಿ ಎಚ್ಚರಿಕೆ ನೀಡಿದ ಹಿಂದೆಯೇ ಈ ಕ್ರಮಕೈಗೊಳ್ಳಲಾಗಿದೆ.
ರಾಯಭಾರಿ ಕಚೇರಿಯು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಜನರು ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು. ತುರ್ತು ನೆರವು ಅಗತ್ಯವಿದ್ದರೆ ಸಹಾಯವಾಣಿ ಸಂಪರ್ಕಿಸಬೇಕು ಎಂದು ರಾಯಭಾರ ಕಚೇರಿಯು ಹೇಳಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.