ಕಲೆಹೆ (ಕಾಂಗೊ): ಕಾಂಗೊದ ಪೂರ್ವಭಾಗದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಅವಘಡದಿಂದಾಗಿ ಸುಮಾರು 400 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
ಸೌತ್ ಕಿವು ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ತೀವ್ರ ಸ್ವರೂಪದ ಪ್ರಾಕೃತಿಕ ಅವಘಡ ಇದಾಗಿದೆ. 394 ಜನರ ಶವ ಪತ್ತೆಯಾಗಿದೆ. ನಾಪತ್ತೆಯಾದವರಿಗೆ ಶೋಧ ಮುಂದುವರಿದಿದೆ.
ನ್ಯಾಮುಕುಬಿ ಗ್ರಾಮದಲ್ಲಿ ನೂರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಸಿಕ್ಕಿ ಉಳಿದಿರುವವರ ರಕ್ಷಣೆಗೆ ಅವಶೇಷಗಳ ನಡುವೆ ತೀವ್ರ ಹುಡುಕಾಟ ನಡೆದಿದೆ. ಮಣ್ಣಿನಡಿಯೂ ಹಲವರು ಸಿಲುಕಿರುವ ಸಾಧ್ಯತೆಗಳಿವೆ.
ತೀವ್ರ ಜಖಂಗೊಂಡಿರುವ, ನಾಮಾವಶೇಷಗೊಂಡ ಮನೆಗಳ ಸ್ಥಳದಲ್ಲಿ ಗುಂಪುಗೂಡಿ ನಿವಾಸಿಗಳು ರೋದಿಸುತ್ತಿರುವ ಮತ್ತು ನಾಪತ್ತೆಯಾಗಿರುವ ತಮ್ಮವರಿಗಾಗಿ ಆತಂಕದಿಂದ ಹುಡುಕಾಟ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸ್ಥಳೀಯ ನಿವಾಸಿ ಅನೌರಿಟೆ ಜಿಕುಜುವಾ ಅವರು, ‘ನನ್ನ ಇಡೀ ಕುಟುಂಬ ಕಳೆದುಹೋಗಿದೆ. ನೆರೆಹೊರೆಯವರು ನಾಪತ್ತೆಯಾಗಿದ್ದಾರೆ. ಗ್ರಾಮವಿಡೀ ಪಾಳುಭೂಮಿಯಾಗಿದೆ. ಮಣ್ಣು, ಕಲ್ಲುಗಳು ಆವರಿಸಿದ್ದು, ನಮ್ಮ ಭೂಮಿ, ಮನೆ ಎಲ್ಲಿತ್ತು ಎಂದು ಹೇಳುವುದೂ ದುಸ್ತರವಾದ ಸ್ಥಿತಿಯಿದೆ’ ಎಂದು ಪರಿಸ್ಥಿತಿಯ ಚಿತ್ರಣ ನೀಡಿದರು.
ಧಾರಾಕಾರ ಮಳೆಯಿಂದಾಗಿ ನದಿ ಉಕ್ಕಿ ಹರಿದಿದ್ದು, ನದಿಪಾತ್ರದಲ್ಲಿದ್ದ ಗ್ರಾಮಗಳು ತೀವ್ರ ಪರಿಣಾಮಕ್ಕೆ ತುತ್ತಾಗಿವೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಪ್ರವಾಹ ಆವರಿಸಿತ್ತು. ಹಲವು ರಸ್ತೆಗಳು ಕೊಚ್ಚಿಹೋದವು ಎಂದರು.
ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಮಿಚಾಕೆ ಟಮಾನ ಅವರು, ಬದುಕುಳಿದವರು ತಮ್ಮವರ ಶವಗಳ ಹುಡುಕಾಟದಲ್ಲಿದ್ದಾರೆ. ಕೆಲವರು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ರಾಷ್ಟ್ರೀಯ ಶೋಕ ಘೋಷಣೆ: ಕಾಂಗೊ ಅಧ್ಯಕ್ಷ ಫೆಲಿಕ್ಸ್ ಶಿಸೆಕೆಡಿ, ಮೃತರ ಗೌರವಾರ್ಥ ಸೋಮವಾರ ದೇಶದಾದ್ಯಂತ ರಾಷ್ಟ್ರೀಯ ಶೋಕ ಘೋಷಿಸಿದ್ದರು. ಪರಿಹಾರ ಕಾರ್ಯಗಳಿಗೆ ಸರ್ಕಾರ ತಂಡಗಳನ್ನು ಕಳುಹಿಸಿದೆ ಎಂದು ತಿಳಿಸಿದರು.
ಉಗಾಂಡಾ, ಕೆನ್ಯಾದ ಕೆಲವೆಡೆ ಧಾರಾಕಾರ ಮಳೆಯಾಗಿದ್ದು, ಪೂರ್ವ ಆಫ್ರಿಕಾದ ಹಲವೆಡೆ ಸಮಸ್ಯೆಯಾಗಿದೆ. ಈ ವಾರದ ಆರಂಭದಲ್ಲಿ ಕಾಂಗೊದ ಗಡಿ ರ‍್ವಾಂಡಾದಲ್ಲಿ ಪ್ರವಾಹ, ಭೂಕುಸಿತದಿಂದ 129 ಮಂದಿ ಸತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.