ಕಾಬೂಲ್: ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸಿದ್ದರಿಂದ ಸಾವಿರಾರು ಮಂದಿ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ನೂರಾರು ಮಂದಿ ವಿಮಾನಗಳನ್ನೇರಲು ಧಾವಿಸುತ್ತಿರುವ ಸಂದರ್ಭದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಐದು ಮೃತದೇಹಗಳನ್ನು ವಾಹನದಲ್ಲಿ ಒಯ್ಯುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ನಿಲ್ದಾಣದಲ್ಲಿ ಗುಂಡಿನ ದಾಳಿಯಿಂದಾಗಿ ಐವರು ಮೃತಪಟ್ಟಿದ್ದಾರೆಯೇ ಅಥವಾ ಕಾಲ್ತುಳಿತದಿಂದ ಸಾವು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಗುಂಪನ್ನು ಚದುರಿಸಲು ಈ ಮೊದಲು ಅಮೆರಿಕದ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದವು ಎಂದು ಮತ್ತೊಬ್ಬರು ಪ್ರತ್ಯಕ್ಷದರ್ಶಿ ತಿಳಿಸಿರುವುದಾಗಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ ಎಂದೂ ವರದಿ ಉಲ್ಲೇಖಿಸಿದೆ.
ಈ ಮಧ್ಯೆ,ಅಫ್ಗಾನಿಸ್ತಾನದಿಂದ ತನ್ನ ಮತ್ತು ಮಿತ್ರ ರಾಷ್ಟ್ರಗಳ ನಾಗರಿಕರು ಸುರಕ್ಷಿತವಾಗಿ ಸ್ವದೇಶಕ್ಕೆ ತೆರಳುವಂತೆ ಅನುಕೂಲ ಕಲ್ಪಿಸಲು ಅಮೆರಿಕ ಆರು ಸಾವಿರ ಯೋಧರನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲು ನಿರ್ಧರಿಸಿದೆ. ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿರುವುದರಿಂದ ಅಮೆರಿಕ ಈ ಕ್ರಮಕೈಗೊಂಡಿದೆ.
ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಹೇಗೆ ಸ್ವೀಕರಿಸಬೇಕೆಂಬ ಬಗ್ಗೆ ಅದರ ನಡವಳಿಕೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ರಷ್ಯಾ ಹೇಳಿದೆ.
ಕಾಬೂಲ್‌ಗೆ ವಿಮಾನ ಸಂಚಾರ ಸ್ಥಗಿತಗೊಳಿಸಿದ ಪಾಕ್
ಅಫ್ಗಾನಿಸ್ತಾನದಲ್ಲಿನ ಅನಿಶ್ಚಿತತೆಯ ಕಾರಣ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ವಿಮಾನಗಳು ಕಾಬೂಲ್‌ಗೆ ಸಂಚಾರ ರದ್ದುಗೊಳಿಸಿವೆ.
ಆಫ್ಗನ್ ನಾಗರಿಕ ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಈ ತೀರ್ಮಾನ ಕೈಗೊಂಡಿದ್ದೇವೆ. ನಮ್ಮ ವಿಮಾನಗಳನ್ನು, ಪ್ರಯಾಣಿಕರನ್ನು ಮತ್ತು ವಿಮಾನ ಸಿಬ್ಬಂದಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.