ಕೈರೊ: ಯುದ್ಧ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿರುವ ಶಾಲೆ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಹೇಳಿದೆ. ಆದರೆ, ಹಮಾಸ್ ಕಮಾಂಡ್ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ.
ಗಾಜಾದ ಜೀಟೌನ್ ನಗರದಲ್ಲಿರುವ ಶಾಲೆ ಮೇಲಿನ ದಾಳಿ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ. 'ಮೂರು ತಿಂಗಳ ಮಗು ಸೇರಿದಂತೆ 13 ಮಕ್ಕಳು, 6 ಮಹಿಳೆಯರು ಸಾವಿಗೀಡಾಗಿದ್ದಾರೆ' ಎಂದು ಹಮಾಸ್ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನೆ, 'ಹಮಾಸ್ ಕಮಾಂಡ್ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ. ಯುದ್ಧ ಸಂತ್ರಸ್ತರಿಗಾಗಿ ಶಾಲೆಯಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯವನ್ನು ಮಿಲಿಟರಿ ಉದ್ದೇಶಕ್ಕೆ ಬಳಸುವುದನ್ನು ಹಮಾಸ್ ಮುಂದುವರಿಸಿತ್ತು' ಎಂದಿದೆ.
2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು. ಸುಮಾರು 1,200ಕ್ಕೂ ಮಂದಿ ಮೃತಪಟ್ಟಿದ್ದರು. ಇದರಿಂದ ಕೆರಳಿದ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಸಂಘರ್ಷದಲ್ಲಿ ಈವರೆಗೆ 41,000ಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ. ಸುಮಾರು 23 ಲಕ್ಷಕ್ಕೂ ಹೆಚ್ಚು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.