ಬೀಜಿಂಗ್: ಚೀನಾದ ಝುಹೈ ನಗರದಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಜನರ ಗುಂಪಿಗೆ ಕಾರು ಗುದ್ದಿಸಿದ ಪರಿಣಾಮ 35 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ಸಂಜೆ 7:48ರ ಸುಮಾರಿಗೆ ಬೀಜಿಂಗ್‌ನಿಂದ ದಕ್ಷಿಣಕ್ಕೆ 2,200 ಕಿ.ಮೀ. ದೂರದಲ್ಲಿರುವ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ ನಾಗರಿಕರು ವ್ಯಾಯಾಮ ಮಾಡುತ್ತಿದ್ದಾಗ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ ಎಂದು ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಘಟನೆ ಸಂಬಂಧ 62 ವರ್ಷದ ಚಾಲಕನನ್ನು ಬಂಧಿಸಲಾಗಿದೆ. ಆದರೆ, ಇದು ಅಪಘಾತವೋ ಅಥವಾ ದಾಳಿಯೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
‘ಕಾರು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ, ಅಪರಾಧಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕೆಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಒತ್ತಾಯಿಸಿದ್ದಾರೆ’ ಎಂದು ಕ್ಸಿನ್ಹುವಾ ತಿಳಿಸಿದೆ.
ಘಟನಾ ಸ್ಥಳದಲ್ಲಿ ಜನರು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಝುಹೈ ನಗರದಲ್ಲಿ ಪ್ರಸ್ತುತ ಚೀನಾದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.