ಮೆಕ್ಸಿಕೊ: ದಕ್ಷಿಣ ಮೆಕ್ಸಿಕೊದಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಬಸ್ ಅಪಘಾತದಲ್ಲಿ ವೆನಿಜುವೆಲ್ಲಾ ಹಾಗೂ ಹೈಟಿ ಮೂಲದ ಮೂವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ 16 ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ 29 ಮಂದಿ ಗಾಯಗೊಂಡಿದ್ದಾರೆ. ಮೆಕ್ಸಿಕೊದ ದಕ್ಷಿಣ ಭಾಗದಲ್ಲಿರುವ ವಹಾಕ ರಾಜ್ಯದ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ ರಸ್ತೆ ತಿರುವಿನಲ್ಲಿ ಒಂದೇ ಕಡೆಗೆ ವಾಲಿದ್ದರಿಂದ ಈ ಅಪಘಾತ ಸಂಭಿಸಿದೆ.
ಕಳೆದ ವಾರವೂ ವಲಸಿಗರನ್ನು ಕರೆದೊಯ್ಯುತ್ತಿದ್ದ ಸರಕು ಸಾಗಣೆ ಟ್ರಕ್ ಗ್ವಾಟೆಮಾಲದ ಬಳಿಯಲ್ಲಿನ ಗಡಿ ಭಾಗದ ಹೆದ್ದಾರಿಯಲ್ಲಿ ಅಪಘಾತಕ್ಕೆ ಸಿಲುಕಿದ್ದರಿಂದಾಗಿ ಅದರಲ್ಲಿದ್ದ ಕ್ಯೂಬಾದ 10 ವಲಸಿಗರು ಮೃತಪಟ್ಟಿದ್ದರು. ಜತೆಗೆ 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಅಮೆರಿಕ ಗಡಿಯತ್ತ ವಲಸಿಗರ ಪ್ರಯಾಣ ಸಂಖ್ಯೆ ಏರಿಕೆಯಾದ ಬಳಿಕ ಹೆದ್ದಾರಿಗಳಲ್ಲಿ ಸರಣಿ ಅಪಘಾತಗಳು ನಡೆಯುತ್ತಲೇ ಇವೆ. ವಲಸಿಗ ಏಜೆಂಟ್‌ಗಳು ಬಸ್‌ಗಳ ಮೇಲೆ ಕಣ್ಗಾವಲು ವಹಿಸಿದ್ದಾರೆ. ಹೀಗಾಗಿ ವಲಸಿಗರು ಮತ್ತು ಕಳ್ಳಸಾಗಣೆದಾರರು ಅಮೆರಿಕದ ಗಡಿಯತ್ತ ತಲುಪಲು ಅಪಾಯಕಾರಿಯಾದ ಸರಕು ಸಾಗಣೆ ವಾಹನಗಳು, ಕ್ರಮಬದ್ಧವಲ್ಲದ ಬಸ್‌ಗಳು ಮತ್ತು ರೈಲುಗಳನ್ನು ಅವಲಂಬಿಸಿದ್ದಾರೆ. ಇಂಥ ವೇಳೆ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.