ಕಾನೊ (ನೈಜೀರಿಯಾ): ವಾಯವ್ಯ ನೈಜೀರಿಯಾದಲ್ಲಿ ಉರುಳಿಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್ ಸಂಗ್ರಹಿಸಲು ಸ್ಥಳೀಯರು ಮುಗಿಬಿದ್ದಾಗ, ಅದು ಸ್ಫೋಟಗೊಂಡು 140 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜಿಗಾವಾ ರಾಜ್ಯದ ಟೌರಾ ಸರ್ಕಾರಿ ಪ್ರದೇಶದ ಮಜಿಯಾ ಎಂಬ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ಕಾಡುತ್ತಿದೆ.
ಟ್ರಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಟ್ಯಾಂಕರ್ ಪಲ್ಟಿಯಾಗಿದೆ. ಅಪಘಾತದ ನಂತರ ಚೆಲ್ಲಿದ ಇಂಧನ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಜಿಗಾವಾ ರಾಜ್ಯದ ಮಜಿಯಾ ಪಟ್ಟಣದಲ್ಲಿ ಮಧ್ಯರಾತ್ರಿ ದುರಂತ ಸಂಭವಿಸಿದ್ದು, ಹೆದ್ದಾರಿಯಲ್ಲಿ ಪಯಣಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಟ್ಯಾಂಕರ್ ಸ್ಫೋಟಗೊಂಡಿದೆ’ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದ್ದಾರೆ. ‘ಸ್ಫೋಟದ ಸ್ಥಳದಲ್ಲೇ 97 ಜನರು ಸಜೀವ ದಹನವಾದರೆ, ಗಾಯಗೊಂಡಿದ್ದ 8 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಜಿಗಾವಾ ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ಮುಖ್ಯಸ್ಥ ಡಾ. ಹರುನಾ ಮೈರಿಗಾ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಬಹುತೇಕರ ಗುರುತು ಪತ್ತೆಯಾಗಿಲ್ಲ. ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.
ರಸ್ತೆಗಳ ಕಳಪೆ ನಿರ್ವಹಣೆಯಿಂದಾಗಿ ಆಫ್ರಿಕಾದ ಅತ್ಯಂತ ಜನನಿಬಿಡ ರಾಷ್ಟ್ರವಾದ ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ದುರಂತಗಳು ಸರ್ವೇ ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.