ಮೆಕ್ಸಿಕೊ ಸಿಟಿ: ಮಧ್ಯ ಮೆಕ್ಸಿಕೊದಲ್ಲಿ ಭಾನುವಾರ ನಡೆದಿರುವ ಗುಂಡಿನ ದಾಳಿಯಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ.
ಲಾಸ್ ತಿನಾಜಸ್ ಪಟ್ಟಣದಲ್ಲಿ ಕೋಳಿ ಕಾಳಗದ ಅನಧಿಕೃತ ಬೆಟ್ಟಿಂಗ್ ಏರ್ಪಡುವ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ 10:30ಕ್ಕೆ ತನಿಖಾಧಿಕಾರಿಗಳು ಘಟನೆಯ ಸ್ಥಳ ತಲುಪಿರುವುದಾಗಿ ವರದಿಯಾಗಿದೆ.
'16 ಮಂದಿ ಪುರುಷರು ಮತ್ತು ಮೂವರು ಮಹಿಳೆಯರ ದೇಹಗಳು ಪತ್ತೆಯಾಗಿದ್ದು, ಆ ದೇಹಗಳ ಮೇಲೆ ಬಂದೂಕಿನ ಗುಂಡುಗಳಿಂದ ಆಗಿರುವ ಗಾಯದ ಗುರುತುಗಳಿವೆ' ಎಂದು ಅಪರಾಧ ಕೃತ್ಯಗಳ ತನಿಖೆ ನಡೆಸುವ ಅಟಾರ್ನಿ ಜನರಲ್ ಕಚೇರಿಯು (ಎಫ್‌ಜಿಇ) ತಿಳಿಸಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಹಲವು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ಕಾರಣ ತಿಳಿದು ಬಂದಿಲ್ಲ.
ಡ್ರಗ್ ದಂಧೆ, ಇಂಧನ ಕಳ್ಳ ಸಾಗಣೆ ಮತ್ತು ಮಾರಾಟ ಸೇರಿದಂತೆ ಇತರೆ ಅನಧಿಕೃತ ಚಟುವಟಿಕೆಗಳ ಕಾರಣ 'ಮಿಚುವಾಕಾನ್' ಸೇರಿದಂತೆ ಕೆಲವು ಭಾಗಗಳಲ್ಲಿ ವಿರೋಧಿ ಗುಂಪುಗಳ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಿರುತ್ತವೆ. ಜಗತ್ತಿನಲ್ಲೇ ಅತಿ ಹೆಚ್ಚು ಅವಕಾಡೊ ಹಣ್ಣುಗಳನ್ನು ಮಿಚುವಾಕಾನ್‌ನಲ್ಲಿ ಬೆಳೆಯಲಾಗುತ್ತದೆ.
2006ರಲ್ಲಿ ಮೆಕ್ಸಿಕೊ ಸರ್ಕಾರವು ಡ್ರಗ್ ನಿಗ್ರಹ ಕಾರ್ಯಾಚರಣೆ ಆರಂಭಿಸಿತು. ಆ ಕಾರ್ಯಾಚರಣೆಯು ವಿವಾದಗಳಿಗೆ ಎಡೆ ಮಾಡಿಕೊಡುವ ಜೊತೆಗೆ ಅಪರಾಧಿಗಳ ನಡುವೆ ಹಲವು ಬಾರಿ ಘರ್ಷಣೆಗೆ ಕಾರಣವಾಗಿದೆ. 2006ರಿಂದ ಈವರೆಗೂ 3,40,000 ಜನರು ಹತ್ಯೆಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.