ಕೊಲಂಬೊ: ಮಾರ್ಕ್ಸ್‌ವಾದಿ ನಾಯಕ ಅನುರಾ ಕುಮಾರ ದಿಸ್ಸನಾಯಕೆ ಅವರು ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
56 ವರ್ಷದ ದಿಸ್ಸನಾಯಕೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಪ್ರಮಾಣವಚನ ಬೋಧಿಸಿದರು. ಅಧ್ಯಕ್ಷರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.
ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಕಣಕ್ಕಿಳಿದಿದ್ದ ದಿಸ್ಸನಾಯಕೆ, ವಿರೋಧ ಪಕ್ಷ ಸಮಗಿ ಜನ ಬಲವೇಗಯ ಅಭ್ಯರ್ಥಿ ಹಾಗೂ ತಮ್ಮ ಸಮೀಪದ ಸ್ಪರ್ಧಿ ಸಜಿತ್ ಪ್ರೇಮದಾಸ್ ಅವರೆದುರು ಜಯ ಸಾಧಿಸಿದ್ದರು.
ದಿಸ್ಸನಾಯಕೆ ಅವರ ಪಕ್ಷವು ಸಂಸತ್ತಿನಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿದೆ. ಆದಾಗ್ಯೂ, ಭ್ರಷ್ಟಾಚಾರ ವಿರೋಧಿ ಕಠಿಣ ಕ್ರಮಗಳು ಮತ್ತು ಜನಸ್ನೇಹಿ ನೀತಿಗಳನ್ನು ರೂಪಿಸುವುದಾಗಿ ನೀಡಿದ್ದ ಭರವಸೆಗಳಿಗೆ ಜನ ಮತ ನೀಡಿದ್ದಾರೆ.
ತಮ್ಮನ್ನು ತಾವು ಬದಲಾವಣೆಗಾಗಿನ ಅಭ್ಯರ್ಥಿ ಎಂದು ಹೇಳಿಕೊಂಡಿದ್ದ ಅವರು, ಅಧಿಕಾರಕ್ಕೇರಿದರೆ ತಮ್ಮ ನೀತಿಗಳಿಗೆ ಜನಾದೇಶ ಪಡೆಯಲು 45 ದಿನಗಳಲ್ಲಿ ಸಂಸತ್ತನ್ನು ವಿಸರ್ಜಿಸುವುದಾಗಿ ಘೋಷಿಸಿದ್ದರು.
2022ರಲ್ಲಿ ಎದುರಾದ ತೀವ್ರ ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾ ಚೇತರಿಸಿಕೊಳ್ಳುತ್ತಿದೆ. ದೇಶವನ್ನು ಚೇತರಿಕೆಯ ಹಾದಿಯಲ್ಲಿ ಮುನ್ನಡೆಸುತ್ತಿರುವುದಾಗಿ ಪ್ರಚಾರದ ವೇಳೆ ಹೇಳಿಕೊಂಡಿದ್ದ ನಿರ್ಗಮಿತ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೆ (75) ಮುಖಭಂಗವಾಗಿದೆ. ಮರು ಆಯ್ಕೆ ಬಯಸಿದ್ದ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
1.7 ಕೋಟಿ ಅರ್ಹ ಮತದಾರರಿರುವ ದ್ವೀಪರಾಷ್ಟ್ರದಲ್ಲಿ ಶನಿವಾರವಷ್ಟೇ ಮತದಾನ ನಡೆದಿತ್ತು. ಶೇ 75ಕ್ಕೂ ಅಧಿಕ ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಭಾನುವಾರ ಫಲಿತಾಂಶ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.