ಬೀಜಿಂಗ್: ವಿಶ್ವದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು, ವರ್ಷಗಳ ಕಾಲ ಸೋಂಕಿನಿಂದ ಜರ್ಝರಿತವಾಗಿದ್ದ ಚೀನಾದ ವುಹಾನ್ ನಗರದಲ್ಲಿ ಭಾನುವಾರ ಸಂಭ್ರಮದ ಗ್ರಾಜುಯೇಶನ್ ಡೇ (ಪದವಿ ಪ್ರದಾನ ಸಮಾರಂಭ) ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಸುಮಾರು 11000 ಕ್ಕೂ ವಿದ್ಯಾರ್ಥಿಗಳಿಗೆ ಸ್ವಾಗತಕ್ಕಾಗಿ ಅದ್ಧೂರಿ ಸಿದ್ಧತೆ ಮಾಡಲಾಗಿತ್ತು. ಕಾರ್ಯಕ್ರಮ ದಲ್ಲಿ ‘2020ರ ಪದವೀಧರರಿಗೆ ಸ್ವಾಗತ ಬಯಸುತ್ತೇವೆ. ನಿಮ್ಮೆಲ್ಲರಿಗೂ ಉತ್ತಮ ಭವಿಷ್ಯ ದೊರೆಯಲಿ ಎಂದು ನಾವು ಹಾರೈಸುತ್ತೇವೆ‘ ಎಂಬ ಸ್ವಾಗತ ಫಲಕವನ್ನು ಹಾಕಲಾಗಿತ್ತು. ನೀಲಿ ಬಣ್ಣದ ನಿಲುವಂಗಿ ಗೌನ್‌ಮತ್ತು ತಲೆಗೆ ವಿಶಿಷ್ಟ ಟೊಪಿ ತೊಟ್ಟ ವಿದ್ಯಾರ್ಥಿಗಳು ಯಾವುದೇ ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ಕಿಕ್ಕಿರಿದ ಸಾಲುಗಳಲ್ಲಿ ಆಸೀನರಾದ್ದರು.
2019ರ ಕೊನೆಯಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಬೀಜಿಂಗ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಾಯಿತು. 76 ದಿನಗಳ ನಂತರ ಲಾಕ್‌ಡೌನ್ ತೆರವಾದ ನಂತರ, ಏಪ್ರಿಲ್‌ನಲ್ಲಿ ಮತ್ತೆ ಚಟುವಟಿಕೆ ಆರಂಭವಾಯಿತು. ಆದರೆ, ಶಾಲಾ–ಕಾಲೇಜುಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರಲಿಲ್ಲ. ಈ ನಡುವೆ ಕಳೆದ ವರ್ಷ ಜೂನ್ ತಿಂಗಳಲ್ಲಿ ವುಹಾನ್ ವಿಶ್ವವಿದ್ಯಾಲಯದವರು ಆನ್‌ಲೈನ್ ಮೂಲಕ ಕೆಲವೊಂದು ನಿರ್ಬಂಧಗಳೊಂದಿಗೆ ಗ್ರಾಜುಯೇಷನ್ ಡೇ ಕಾರ್ಯಕ್ರಮಗಳನ್ನು ನಡೆಸಿದರು.
ಕೋವಿಡ್ ಸೋಂಕಿನ ನಿರ್ಬಂಧಗಳ ನಡುವೆ ಕಳೆದ ವರ್ಷದ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲು ಸಾಧ್ಯವಾಗದ 2200 ವಿದ್ಯಾರ್ಥಿಗಳಿಗೆ, ಭಾನುವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.
ಈ ಸಂಭ್ರಮದ ಆಚರಣೆಗಳ ನಡುವೆ ಚೀನಾದಲ್ಲಿ ಮಂಗಳವಾರ 20 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 18 ಪ್ರಕರಣಗಳು ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.