ವಿಶ್ವಸಂಸ್ಥೆ: ಜೈಷ್ –ಎ –ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದ್ದು ವಿಶ್ವಸಂಸ್ಥೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದು ಭದ್ರತಾ ಮಂಡಳಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ನಡೆದ ಭದ್ರತಾ ಮಂಡಳಿಯ ಅರ್ಧ ವಾರ್ಷಿಕ ಸಭೆಯಲ್ಲಿವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಜೊನಾಥನ್ ಕೊಹೆನ್, ‘ಮಸೂದ್ ಅಜರ್‌ನನ್ನು ಕಪ್ಪು ಪಟ್ಟಿಗೆ ಸೇರಿದ ಕ್ರಮವು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟನ್ನು ತೋರಿಸಿದೆ’ ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಹಾಗೂ ಲೆವಂತ್ (ಐಎಸ್‌ಐಎಲ್) 2015ರಲ್ಲಿ ದಕ್ಷಿಣ ಏಷ್ಯಾದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸರಣಿ ದಾಳಿ ನಡೆಸಿದೆ. ಐಎಸ್‌ಐಎಸ್ ಕೂಡದಕ್ಷಿಣ ಏಷ್ಯಾದಲ್ಲಿ ಅಸ್ತಿತ್ವ ಸ್ಥಾಪಿಸಲು ಪ್ರಯತ್ನಿಸುತ್ತಿದೆ.ಈಗಾಗಲೇ ಈ ಎರಡೂ ಸಂಘಟನೆಗಳುಸಿರಿಯಾ ಮತ್ತು ಇರಾಕ್‌ನಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದು ದಕ್ಷಿಣ ಏಷ್ಯಾದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿವೆ. ಇವುಗಳಿಗೆ ಇನ್ನಿತರ ಉಗ್ರ ಸಂಘಟನೆಗಳು ಕೈ ಜೋಡಿಸಬಾರದು. ಹೀಗಾಗಿ ವಿಶ್ವಸಂಸ್ಥೆ ದಿಟ್ಟ ಕ್ರಮ ಕೈಗೊಳ್ಳುತ್ತಿದೆ ಎಂದು ಕೊಹೆನ್ ವಿವರಿಸಿದ್ದಾರೆ.
ಚೀನಾದ ಯಾವೊ ಶಾವ್‌ಜುನ್ ಮಾತನಾಡಿ, ‘ಭದ್ರತಾ ಮಂಡಳಿಯ 1267 ಸಮಿತಿ ಜಾಗತಿಕ ಭಯೋತ್ಪಾದನೆಯನ್ನು ಕೊನೆಗಾಣಿಸಲು ಶ್ರಮಿಸುತ್ತಿದೆ. ಬೀಜಿಂಗ್‌ನಿಂದ ಭಯೋತ್ಪಾದನಾ ನಿಗ್ರಹಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದಿದ್ದಾರೆ.
ಜರ್ಮನ್ ಮತ್ತು ಪೋಲೆಂಡ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ಸಹಕಾರ ನೀಡಿವೆ. ಅಂತರರಾಷ್ಟ್ರೀಯ ಸಮುದಾಯ ಭಯೋತ್ಪಾದನಾ ಸಂಘಟನೆಗಳ ನಿರ್ನಾಮಕ್ಕೆ ಒಗ್ಗಟ್ಟಾಗಬೇಕು ಎಂದುವಿಶ್ವಸಂಸ್ಥೆಯ ಪೋಲೆಂಡ್ ಪ್ರತಿನಿಧಿ ಜೊವಾನಾ ವ್ರೊನೆಕಾ ಮತ್ತು ಜರ್ಮನಿಯ ವಿಶ್ವಸಂಸ್ಥೆ ರಾಯಭಾರಿ ಕ್ರಿಸ್ಟೋಫ್ ಹ್ಯೂಗೆನ್ ಹೇಳಿದ್ದಾರೆ.
ಜೈಷ್ –ಎ –ಮೊಹಮ್ಮದ್ ಸಂಘಟನೆ ಈ ವರ್ಷದ ಆರಂಭದಲ್ಲಿ ಭಾರತದ ಭದ್ರತಾ ಪಡೆಗಳ ವಿರುದ್ಧ ನಡೆದ ಪುಲ್ವಾಮಾ ದಾಳಿಯಲ್ಲಿ ಪಾತ್ರವಹಿಸಿತ್ತು. ಮಸೂದ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವಭಾರತದ ಪ್ರಸ್ತಾವಕ್ಕೆಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್ ಭಾರತಕ್ಕೆ ಬೆಂಬಲವಾಗಿ ನಿಂತವು.ಕೊನೆಗೆಮೇ 1ರಂದುವಿಶ್ವಸಂಸ್ಥೆ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿತು. ಇದು ಭಾರತದ ದಶಕಗಳ ಅವಿರತ ಪ್ರಯತ್ನಕ್ಕೆ ಸಿಕ್ಕ ಜಯವಾಗಿತ್ತು. ಇದರಿಂದ ಅಜರ್‌ಗೆ ಶಸ್ತ್ರಾಸ್ತ್ರ ಸಂಗ್ರಹಕ್ಕೆ, ಪ್ರಯಾಣಕ್ಕೆ ಹಾಗೂಹಣದ ಹರಿವಿಗೆ ತಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.