ADVERTISEMENT

ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಪತ್ರಕರ್ತೆ ಬಂಧನ: ವಿರೋಧದ ನಂತರ ಬಿಡುಗಡೆ

ಏಜೆನ್ಸೀಸ್
Published 6 ಜೂನ್ 2021, 8:55 IST
Last Updated 6 ಜೂನ್ 2021, 8:55 IST
ಪೊಲೀಸರಿಂದ ಬಿಡುಗಡೆಯಾಗಿ ಹೊರ ಬರುತ್ತಿರುವ ಅಲ್‌ ಜಜೀರಾ ಪತ್ರಕರ್ತೆ ಗಿವಾರ ಬುಡೆರಿ (ಎಎಫ್‌ಪಿ ಚಿತ್ರ)
ಪೊಲೀಸರಿಂದ ಬಿಡುಗಡೆಯಾಗಿ ಹೊರ ಬರುತ್ತಿರುವ ಅಲ್‌ ಜಜೀರಾ ಪತ್ರಕರ್ತೆ ಗಿವಾರ ಬುಡೆರಿ (ಎಎಫ್‌ಪಿ ಚಿತ್ರ)   

ಟೇಲ್‌ ಅವೀವ್‌: ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ವರದಿ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಅಲ್‌ ಜಜೀರಾ ಪರ್ತಕರ್ತೆ ಗಿವಾರ ಬುಡೆರಿ ಎಂಬುವವರನ್ನು ಸ್ಥಳೀಯ ಪೊಲೀಸರು ಭಾನುವಾರ ಬಂಧಿಸಿದರು. ಘಟನೆ ಖಂಡಿಸಿ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗುತ್ತಲೇ ಪೊಲೀಸರು ಪತ್ರಕರ್ತೆಯನ್ನು ಬಿಡುಗಡೆ ಮಾಡಿದ್ದಾರೆ.

‘ಪತ್ರಕರ್ತೆ ಬುಡೆರಿ ಅವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ತಮ್ಮ ಗುರುತು ಸಾಬೀತು ಮಾಡಲು ನಿರಾಕರಿಸಿದರು,’ ಎಂದು ಇಸ್ರೇಲ್‌ ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಪತ್ರಕರ್ತೆಯನ್ನು ನಾಲ್ಕೈದು ಮಂದಿ ಪೊಲೀಸರು ಎಳೆದು ಕಾರಿನಲ್ಲಿ ಕೂರಿಸುತ್ತಿರುವ ವಿಡಿಯೊ ಸದ್ಯ ವಿಶ್ವದಾದ್ಯಂತ ವೈರಲ್‌ ಆಗಿದೆ. ‘ವರದಿಗಾರ್ತಿಯ ಕ್ಯಾಮೆರಾವನ್ನು ಪೊಲೀಸರು ಧ್ವಂಸ ಮಾಡಿದ್ದಾರೆ,’ ಎಂದು ಮಾಧ್ಯಮ ಸಂಸ್ಥೆ ಅಲ್‌ ಜಜೀರಾ ಹೇಳಿದೆ.

ADVERTISEMENT

ಬಂಧನವಾದ ಕೆಲ ಗಂಟೆಗಳ ನಂತರ ಪತ್ರಕರ್ತೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ, ಪ್ರತಿಭಟನೆಗಳು ನಡೆಯುತ್ತಿರುವ ಶೇಖ್‌ ಜರ್ರಾ ಪ್ರದೇಶವನ್ನು ಪ್ರವೇಶಿಸದಂತೆ ಪತ್ರಕರ್ತೆ ಬುಡೆರಿ ಅವರಿಗೆ 15 ದಿನ ನಿಷೇಧ ವಿಧಿಸಲಾಗಿದೆ ಎಂದು ಅಲ್‌ ಜಜೀರಾ ತಿಳಿಸಿದೆ.

‘ಪೊಲೀಸರು ಎಲ್ಲೆಡೆಯಿಂದ ಬಂದು ಆವರಿಸಿಕೊಂಡರು. ಏಕೆ ಎಂದು ನನಗೆ ಗೊತ್ತಾಗಲಿಲ್ಲ. ಅವರು ನನ್ನನ್ನು ಕಾರಿನೊಳಗೆ ತಳ್ಳಿ ಕಾಲಿನಿಂದ ಒದ್ದರು,’ ಎಂದು ಬುಡೆರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.