ನ್ಯೂಯಾರ್ಕ್: ಜಾಗತಿಕ ಕದನ ವಿರಾಮ ಘೋಷಿಸಲು ಭಾರತ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೇತೃತ್ವದಲ್ಲಿ ಆಯೋಗ ರಚಿಸುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವುದಾಗಿ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದರು.
ಕನಿಷ್ಠ ಐದು ವರ್ಷಗಳ ಕಾಲ ಕದನ ವಿರಾಮ ಘೋಷಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವುದನ್ನು ಖಚಿತಪಡಿಸಬೇಕಿದೆ ಎಂದವರು ಹೇಳಿದರು.
ಮೋದಿ, ಪೋಪ್ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಆಯೋಗದ ಮಧ್ಯಸ್ಥಿಕೆಯನ್ನು ವಿಶ್ವದ ಮೂರು ಮಹಾನ್ ಶಕ್ತಿಗಳಾದ ರಷ್ಯಾ, ಚೀನಾ, ಅಮೆರಿಕ ಒಪ್ಪಿಕೊಳ್ಳುತ್ತವೆ ಎಂದು ತಿಳಿಸಿದರು.
ಯುದ್ದವನ್ನು ನಿಲ್ಲಿಸಲು ಈ ಆಯೋಗವು ಭೇಟಿಯಾಗಿ ಪ್ರಸ್ತಾಪವನ್ನು ಸಲ್ಲಿಸಬೇಕಿದೆ. ಕನಿಷ್ಠ ಐದು ವರ್ಷ ಕದನ ವಿರಾಮಕ್ಕಾಗಿ ಒಪ್ಪಂದಮಾಡಿಕೊಳ್ಳಬೇಕಿದೆ. ಈ ಮೂಲಕ ಜಗತ್ತಿನೆಲ್ಲೆಡೆಯ ಸರ್ಕಾರಗಳು ವಿಶೇಷವಾಗಿ ಯುದ್ಧಪೀಡಿತ ದೇಶಗಳು ತಮ್ಮ ಜನರಿಗೆ ನೆರವಾಗಬಹುದಾಗಿದೆ ಎಂದು ಒಬ್ರಡಾರ್ ಮಾಡಿರುವ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮುಂದಿನ ಐದು ವರ್ಷ ಯಾವುದೇ ಉದ್ವಿಗ್ನ ವಾತಾವರಣ, ಹಿಂಸಾಚಾರವಿಲ್ಲದೆ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.