ಲಂಡನ್ : ‘ಹ್ಯಾರಿ ಪಾಟರ್’ ಸಿನಿಮಾ ಖ್ಯಾತಿಯ ಬ್ರಿಟಿಷ್ ನಟ ಮೈಕೆಲ್ ಗ್ಯಾಂಬೊನ್ (82) ಗುರುವಾರ ನಿಧನರಾದರು.
ನ್ಯುಮೋನಿಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
‘ಹ್ಯಾರಿ ಪಾಟರ್’ ಸರಣಿಯ ಎಂಟು ಸಿನಿಮಾಗಳ ಪೈಕಿ ಆರರಲ್ಲಿ ಗ್ಯಾಂಬೊನ್ ಅವರು, ಪ್ರೊಫೆಸರ್ ಆಲ್ಬಸ್ ಡಂಬಲ್ ಡೋರ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯವು ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ತಂದುಕೊಟ್ಟಿತ್ತು. ಅಲ್ಲದೇ, ಹೊಸಪೀಳಿಗೆಯ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿತ್ತು.
ಗ್ಯಾಂಬೊನ್ ಅವರು ಜನಿಸಿದ್ದು ಐರ್ಲೆಂಡ್‌ನಲ್ಲಿ. ಎಂಜಿನಿಯರ್ ಆಗಿ ತರಬೇತಿ ಪಡೆದಿದ್ದ ಅವರು ಲಂಡನ್‌ಗೆ ತೆರಳಿ ಅಲ್ಲಿನ ರಾಯಲ್ ನ್ಯಾಷನಲ್ ಥಿಯೇಟರ್‌ನ ಸಕ್ರಿಯ ಸದಸ್ಯರಾದರು. ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ರಚನೆಯ ನಾಟಕಗಳಲ್ಲಿನ ಹಲವು ಪಾತ್ರಗಳಿಗೆ ಜೀವ ತುಂಬಿದ್ದು ಅವರ ಹೆಗ್ಗಳಿಕೆ.
ಡರ್ಬಿನ್‌ನಲ್ಲಿ ನಡೆದ ‘ಒಥೆಲೊ’ ನಾಟಕದ ಮೂಲಕ ಅವರ ರಂಗ ಪಯಣ ಆರಂಭಗೊಂಡಿತು. ‘ಹ್ಯಾಮ್ಲೆಟ್’ ನಾಟಕದಲ್ಲಿನ ಸಣ್ಣ ಪಾತ್ರ ಅವರ ನಟನಾ ಬದುಕಿಗೆ ಹೊಸ ತಿರುವು ನೀಡಿತು. ಅರವತ್ತರ ದಶಕದಲ್ಲಿ ತೆರೆಕಂಡ ‘ಒಥೆಲೊ’ ಚಿತ್ರದ ಮೂಲಕ ಅವರು ಸಿನಿ ಪಯಣ ಆರಂಭಿಸಿದರು.
ಐದು ದಶಕಗಳಿಗೂ ಹೆಚ್ಚು ಕಾಲ ಟಿ.ವಿ, ರಂಗಭೂಮಿ, ರೇಡಿಯೊ, ಸಿನಿಮಾ ನಟನೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ, ‘ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್’ ಹಾಗೂ ‘ಟೆಲಿವಿಷನ್ ಆರ್ಟ್ಸ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.