ಬೆಂಗಳೂರು: ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್ ಸತ್ಯ ನಾದೆಲ್ಲಾ ಅವರ ಮಗ, 26 ವರ್ಷದ ಝೈನ್ ನಾದೆಲ್ಲಾ ಅವರು ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮೃತರಾಗಿದ್ದಾರೆ. ಝೈನ್ ಅವರು ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದರು.
ಮೈಕ್ರೋಸಾಫ್ಟ್ ಕಚೇರಿಯು ತನ್ನ ಸಿಬ್ಬಂದಿ ವರ್ಗಕ್ಕೆ ಝೈನ್ ಅವರು ಮೃತಪಟ್ಟಿರುವ ಬಗ್ಗೆ ಮೈಲ್ ಕಳುಹಿಸಿದೆ ಎಂದು 'ಬ್ಲೂಮ್‌ಬರ್ಗ್.ಕಾಮ್' ವರದಿ ಮಾಡಿದೆ.
'ಝೈನ್ ಅವರ ಸಂಗೀತದದ ಬಗೆಗಿನ ಅಭಿರುಚಿ, ಮನಸೆಳೆಯುವ ಮುಗುಳ್ನಗು ಸದಾ ನೆನಪಲ್ಲಿ ಉಳಿಯುತ್ತದೆ. ಕುಟುಂಬಸ್ಥರು ಸೇರಿ ತನ್ನನ್ನು ಪ್ರೀತಿಸುವ ಎಲ್ಲರಿಗೂ ಅಗಾಧ ಸಂತಸವನ್ನು ನೀಡುತ್ತಿದ್ದರು' ಎಂದು ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಸಿಇಒ ಜೆಫ್ ಸ್ಪೆರ್ರಿಂಗ್ ಹೇಳಿದ್ದಾರೆ. ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ತಮ್ಮ ಹೇಳಿಕೆಯನ್ನು ಜೆಫ್ ಹಂಚಿಕೊಂಡಿದ್ದಾರೆ.
ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನದ ಅಭಿವೃದ್ಧಿಗೆ ಝೈನ್ ಹುಟ್ಟು ಕಾರಣ
ಶಸ್ತ್ರ ಚಿಕಿತ್ಸೆ ಮೂಲಕ ತಾಯಿ ಗರ್ಭದಿಂದ ಹೊರತೆಗೆಯಲ್ಪಟ್ಟ ಮಗು ಝೈನ್. ಗರ್ಭದಲ್ಲಿದ್ದಾಗ ಚಲನೆ ನಿಲ್ಲಿಸಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಬೇಕಾಯಿತು. ಉಸಿರಾಟವಿದ್ದರೂ ಮಗು ಅಳುತ್ತಿರಲಿಲ್ಲ. ಗರ್ಭದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಗುವಿನ ಮಿದುಳಿನ ನರಗಳಲ್ಲಿ ರಕ್ತ ಸಂಚಾರ ವ್ಯತ್ಯಯದಿಂದ ದೇಹದ ಚಲನೆ ದುರ್ಬಲಗೊಂಡಿತ್ತು.
ಆರ್ಕಿಟೆಕ್ಟ್ ಆಗಿದ್ದ ಪತ್ನಿ ಮಗ ಝೈನ್‌ನವಿಶೇಷವಾಗಿ ಆರೈಕೆ ಮಾಡುತ್ತಿದ್ದರು.
ಜಗತ್ತಿನ ವಿಶೇಷ ವ್ಯವಸ್ಥೆಯ ಅಗತ್ಯವಿರುವ ಶತಕೋಟಿ ಅಂಗವಿಕಲರಿಗೆ ಸಹಕಾರಿಯಾಗುವ ತಂತ್ರಜ್ಞಾನ ಅಭಿವೃದ್ಧಿಗೆ ಝೈನ್ ಹುಟ್ಟುಮುನ್ನುಡಿಯಾಗಿತ್ತು. ಆಟಿಸಂ ಸೇರಿ ಹಲವು ರೀತಿಯ ಅಂಗವಿಕಲತೆ ಹೊಂದಿರುವ ಸಾಕಷ್ಟು ಜನರಿಗೆ ಉದ್ಯೋಗ ನೀಡಿ ಅವರಿಂದಲೇ ಅಂಗವಿಕಲರ ಹಲವು ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ಅಭಿವೃದ್ಧಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.