ಜೆರುಸಲೇಂ: ಇಸ್ರೇಲ್ ವಿರುದ್ಧ ಇರಾನ್ ಆಡಳಿತವು ನಿರಂತರವಾಗಿ ನಡೆಸುತ್ತಿರುವ ದಾಳಿಗೆ ಪ್ರತಿದಾಳಿ ನಡೆಸುತ್ತಿದ್ದೇವೆ. ದೇಶವನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗೆ ಇದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.
ಇಸ್ರೇಲ್ ಸೇನೆ, ಇರಾನ್ ವಿರುದ್ಧ ಶನಿವಾರ ದಾಳಿ ಆರಂಭಿಸಿವೆ. ಈ ಸಂಬಂಧ ಟ್ವೀಟ್ ಮಾಡಿರುವ ಐಡಿಎಫ್, 'ಇರಾನ್ ಆಡಳಿತವು ಇಸ್ರೇಲ್ ವಿರುದ್ಧ ತಿಂಗಳಿನಿಂದ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿನ ಸೇನಾ ನೆಲೆಗಳ ಮೇಲೆ ಐಡಿಎಫ್ ದಾಳಿ ನಡೆಸುತ್ತಿವೆ' ಎಂದು ತಿಳಿಸಿದೆ.
'ಇರಾನ್ ಆಡಳಿತ ಮತ್ತು ಅದರ ಬೆಂಬಲಿತ ಸಂಘಟನೆಗಳು, ಅಕ್ಟೋಬರ್ 7ರಿಂದ ಇರಾನ್ ಸೇರಿದಂತೆ ಏಳು ಕಡೆಗಳಿಂದ ಇಸ್ರೇಲ್‌ನ ಮೇಲೆ ಪಟ್ಟುಬಿಡದೆ ದಾಳಿ ಮಾಡುತ್ತಿವೆ. ಪ್ರಪಂಚದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ತನ್ನ ಮೇಲಿನ ಆಕ್ರಮಣಗಳಿಗೆ ಪ್ರತ್ಯುತ್ತರ ನೀಡುವ ಹಕ್ಕು ಮತ್ತು ಕರ್ತವ್ಯವನ್ನು ಇಸ್ರೇಲ್ ಸಹ ಹೊಂದಿದೆ. ಅದಕ್ಕಾಗಿ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಸಾಮರ್ಥ್ಯವನ್ನು ಸಂಪೂರ್ಣ ಸಜ್ಜುಗೊಳಿಸಿದ್ದೇವೆ' ಎಂದು ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ.
'ಇಸ್ರೇಲ್ ಮತ್ತು ಇಸ್ರೇಲಿಗರನ್ನು ರಕ್ಷಿಸಲು ಅಗತ್ಯವಿರುವ ಏನೆಲ್ಲ ಮಾಡಬೇಕಾಗುತ್ತದೋ, ಅದನ್ನೆಲ್ಲ ಮಾಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಸೇನೆ ಮುಖ್ಯಸ್ಥ ಹರ್ಜಿ ಹಲೇವಿ ಅವರು ವಾಯುಪಡೆಯ ರಹಸ್ಯ ಕಮಾಂಡ್ ಸೆಂಟರ್‌ನಲ್ಲಿ ಇದ್ದು, ಇರಾನ್ ಮೇಲಿನ ದಾಳಿಗೆ ಸಂಬಂಧಿಸಿದ ಆದೇಶಗಳನ್ನು ನೀಡುತ್ತಿದ್ದಾರೆ ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದೆ.
ಗಾಜಾ, ಲೆಬನಾನ್ ಮೇಲೆ ಮುಂದುವರಿದ ದಾಳಿ
ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಅಂತರರಾಷ್ಟ್ರೀಯ ವಲಯದಲ್ಲಿ ಒತ್ತಡ ಹೆಚ್ಚುತ್ತಿದ್ದರೂ, ಗಾಜಾ ಹಾಗೂ ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ಸೇನೆ ತೀವ್ರಗೊಳಿಸಿದೆ.
ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 38 ಜನರು ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಬನಾನ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು ನೆಲಸಿದ್ದ ಕಟ್ಟಡದ ಬಳಿಯೇ ವಾಯುದಾಳಿ ನಡೆದಿದ್ದು, ಅಲ್ಲಿನ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಮೂವರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.