ಬೈರೂತ್ : ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಗುರುವಾರ ನಸುಕಿನಲ್ಲಿ ಭಾರಿ ವೈಮಾನಿಕ ದಾಳಿಗಳು ನಡೆದಿವೆ. ವೈಮಾನಿಕ ದಾಳಿಗೆ ತುತ್ತಾದ ಪ್ರದೇಶಗಳಲ್ಲಿ ಲೆಬನಾನ್‌ನ ವಿಮಾನ ನಿಲ್ದಾಣದ ಪಕ್ಕದಲ್ಲಿನ ಪ್ರಮುಖ ತಾಣವೂ ಸೇರಿದೆ.
ಈ ತಾಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಇಸ್ರೇಲ್ ಸೇನೆಯು, ಅಲ್ಲಿ ಹಿಜ್ಬುಲ್ಲಾ ಉಗ್ರರು ಮಿಲಿಟರಿ ಸೌಲಭ್ಯಗಳನ್ನು ಹೊಂದಿದ್ದರು ಎಂದು ಹೇಳಿದೆ. ಅಲ್ಲದೆ, ದಾಳಿಗೂ ಮೊದಲು ಸುತ್ತಮುತ್ತಲಿನ ನಿವಾಸಿಗಳಿಗೆ ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿತ್ತು.
ಯುದ್ಧದ ಆರಂಭದಿಂದಲೂ ತೀವ್ರ ಬಾಂಬ್ ದಾಳಿಗೆ ತುತ್ತಾಗಿರುವ ಬೇತ್ ಲಾಯಿಯಾ ಸೇರಿದಂತೆ, ಉತ್ತರ ಗಾಜಾದಲ್ಲಿ ತಿಂಗಳಿಂದ ನಡೆಯುತ್ತಿರುವ ಭೂ ದಾಳಿಯನ್ನು ಮತ್ತಷ್ಟು ವಿಸ್ತರಿಸಿರುವುದಾಗಿ ಇಸ್ರೇಲ್ ಗುರುವಾರ ಘೋಷಿಸಿದೆ. ಈ ಪ್ರದೇಶಗಳಲ್ಲಿ ಹಮಾಸ್ ಉಗ್ರರು ಮತ್ತೆ ಸಂಘಟಿತರಾಗಿದ್ದಾರೆ ಎಂದು ಅದು ಹೇಳಿದೆ.
ಇಸ್ರೇಲ್ ದಾಳಿಯಿಂದ ಲೆಬನಾನ್‌ನಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸುಮಾರು 13,600 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ 43,000ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕದ ಏರೋಸ್ಪೇಸ್ ದೈತ್ಯ ಬೋಯಿಂಗ್‌ನಿಂದ 25 ಸುಧಾರಿತ ಎಫ್ -15 ಯುದ್ಧ ವಿಮಾನಗಳನ್ನು ₹43836 ಕೋಟಿಗೆ ಖರೀದಿಸಲು ಒಪ್ಪಂದಕ್ಕೆ ಬಂದಿರುವುದಾಗಿ ಇಸ್ರೇಲ್ ಹೇಳಿದೆ. ಒಪ್ಪಂದವು ಈ ವರ್ಷದ ಆರಂಭದಲ್ಲಿ ಅಮೆರಿಕ ಅನುಮೋದಿಸಿದ ನೆರವಿನ ಪ್ಯಾಕೇಜ್‌ನ ಭಾಗವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ವಿಮಾನಗಳ ಪೂರೈಕೆಯು 2031ರಲ್ಲಿ ಪ್ರಾರಂಭವಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ 25 ವಿಮಾನಗಳನ್ನು ಖರೀದಿಸುವ ಆಯ್ಕೆಯೂ ಇದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.