ಕಠ್ಮಂಡು: ನೇಪಾಳದ ಹೆಸರಾಂತ ಪರ್ವತಾರೋಹಿ ಮಿಂಗ್ಮಾ ಜಿ ಶೇರ್ಪಾ ಅವರು 8,000 ಮೀಗಿಂತಲೂ ಎತ್ತರದಲ್ಲಿರುವ ಪರ್ವತದ ಶಿಖರಗಳನ್ನು ಪೂರಕ ಆಮ್ಲಜನಕವಿಲ್ಲದೆ ಹತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ನೇಪಾಳಿ ಪರ್ವತಾರೋಹಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
38 ವರ್ಷದ ಮಿಂಗ್ಮಾ ಅವರು ಸಂಜೆ 4.06ರ ಸುಮಾರಿಗೆ ಟಿಬೆಟ್‌ನ ಶಿಶಾಪಾಂಗ್ಮಾ(8,027 ಮೀಟರ್) ಶಿಖರದ ಮೇಲೆ ನಿಂತು ಈ ಸಾಧನೆ ಮಾಡಿದ್ದಾರೆ. ಪೂರಕ ಆಮ್ಲಜನಕ ಬಳಸದೆ ಈ ಸಾಧನೆ ಮಾಡಿದ ನೇಪಾಳದ ಮೊದಲ ಆರೋಹಿಯಾಗಿದ್ದಾರೆ ಎಂದು ಇಮ್ಯಾಜಿನ್ ನೇಪಾಳ್ ಟ್ರೆಕ್ಸ್‌ನ ನಿರ್ದೇಶಕ ದಾವಾ ಶೆರ್ಪಾ ಹೇಳಿದ್ದಾರೆ.
‘ಇಮ್ಯಾಜಿನ್ ನೇಪಾಳ್ ಟ್ರೆಕ್ಸ್‌ನಿಂದ 11 ಸದಸ್ಯರ ತಂಡವನ್ನು ಮುನ್ನಡೆಸಿದ್ದ ಮಿಂಗ್ಮಾ 2006ರಲ್ಲಿ ಎಡ್ರ್ನೆ ಪಸಾಬನ್ ತೆಗೆದುಕೊಂಡ ಸ್ಪ್ಯಾನಿಷ್ ಮಾರ್ಗದ ಮೂಲಕ ಸಂಜೆ 4:06ಕ್ಕೆ ಶಿಖರವನ್ನು ತಲುಪಿದರು’ ಎಂದು ಸಂಘಟಕರು ಹೇಳಿದ್ದಾರೆ.
2022ರಲ್ಲಿ ಮಿಂಗ್ಮಾ ಅವರು ಪೂರಕ ಆಮ್ಲಜನಕವಿಲ್ಲದೆ ಮೌಂಟ್ ಎವರೆಸ್ಟ್, ಮೌಂಟ್ ದೌಲಗಿರಿ ಮತ್ತು ಮೌಂಟ್ ಕಾಂಚನಜುಂಗಾಗಳನ್ನು ಏರಿದ್ದರು. 2021ರಲ್ಲಿ ಮನಸ್ಲು ಪರ್ವತ, 2019ರಲ್ಲಿ ಗಶೇರ್‌ಬ್ರಮ್–2, 2018ರಲ್ಲಿ ಹೊಟ್ಸೆ ಮತ್ತು ಬ್ರಾಡ್ ಶಿಖರಗಳನ್ನು ಏರಿದ್ದರು. 2017ರಲ್ಲಿ ಕೆ2, ಮಕಲು, ನಂಗಾ ಪರ್ಬಾತ್ ಶಿಖರ ಏರಿದ್ದರು. 2016ರಲ್ಲಿ ಗಶೇರ್‌ಬ್ರಮ್ ಮತ್ತು 2015ರಲ್ಲಿ ಅನ್ನಪೂರ್ಣ ಶಿಖರ ಏರಿದ್ದರು.
ಪೂರ್ವ ನೇಪಾಳದ ಡೋಲಾಖಾ ಜಿಲ್ಲೆಯ ರೋಲ್ವಾಲಿಂಗ್‌ನಲ್ಲಿ ಜನಿಸಿದ ಮಿಂಗ್ಮಾ ಅವರು ಇಮ್ಯಾಜಿನ್ ನೇಪಾಳ್ ಟ್ರೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು ಟ್ರೆಕ್ಕಿಂಗ್ ಮತ್ತು ಪರ್ವತಾರೋಹಣ ಸೇವೆಗಳನ್ನು ಸಂಘಟಿಸುವ ಮತ್ತು ನಿರ್ವಹಿಸುವುದರ ಮೇಲೆ ಕೆಲಸ ಮಾಡುತ್ತಿರುವ ಸಾಹಸ ಉತ್ತೇಜಕ ಕಂಪನಿಯಾಗಿದೆ.
2007ರಿಂದ 2024ರವರೆಗಿನ ತಮ್ಮ ವೃತ್ತಿಜೀವನದಲ್ಲಿ ಮಿಂಗ್ಮಾ ಅವರು, ಎವರೆಸ್ಟ್ ಶಿಖರಗಳು (ಉತ್ತರ ಮತ್ತು ದಕ್ಷಿಣ ಎರಡೂ ಕಡೆಯಿಂದ), ಕೆ 2ನ ಐದು ಆರೋಹಣಗಳು ಮತ್ತು ಅನ್ನಪೂರ್ಣ , ಧೌಲಗಿರಿ, ಮಕಾಲು, ಕಾಂಚನಜುಂಗಾ ಮತ್ತು ಮನಸ್ಲು (ಏಳು ಬಾರಿ) ಶಿಖರಗಳನ್ನು ಏರಿದ ಖ್ಯಾತಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.