ಢಾಕಾ: ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿರುವ ನೆರೆಯ ಬಾಂಗ್ಲಾದೇಶದಲ್ಲಿ ಹಲವು ಹಿಂದೂ ದೇವಸ್ಥಾನಗಳು, ಹಿಂದೂಗಳ ಮನೆಗಳು ಮತ್ತು ಉದ್ಯಮ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅಲ್ಲದೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅವಾಮಿ ಲೀಗ್ ಸಂಬಂಧಿತ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ದೇಶ ತೊರೆದಿದ್ದಾರೆ. ಆ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತಷ್ಟು ಹೆಚ್ಚಿದೆ.
‘ಹಿಂದೂ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಮನೆಗಳ ಧ್ವಂಸ ಮುಂತಾದ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ’ಎಂದು ಹಿಂದೂ ಬುದ್ಧಿಸ್ಟ್ ಕ್ರಿಶ್ಚಿಯನ್ ಏಕತಾ ಪರಿಷತ್ತಿನ ನಾಯಕರಾದ ಕಜೋಲ್ ದೇವನಾಥ್ ಪಿಟಿಐಗೆ ತಿಳಿಸಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ, ಹಸೀನಾ ಅವರ ಅವಾಮಿ ಲೀಗ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಹಿಂದೂ ನಾಯಕರನ್ನು ವಾಯುವ್ಯ ಬಾಂಗ್ಲಾದ ಸಿರಾಜ್ ಗಂಜ್ ಮತ್ತು ರಂಗಪುರದಲ್ಲಿ ಹತ್ಯೆ ಮಾಡಲಾಗಿದೆ ಎಂದು ದೇವನಾಥ್ ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ದುಷ್ಕರ್ಮಿಗಳು ಹಿಂದೂಗಳ ಅಂಗಡಿಗಳನ್ನು ಲೂಟಿ ಮಾಡಿ, ದೇವಾಲಯಗಳನ್ನು ಧ್ವಂಸ ಮಾಡಿ, ಹಿಂದೂ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಭಾನುವಾರದಿಂದ ಅಸಹಕಾರ ಚಳವಳಿ ಆರಂಭಿಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಸದ್ಯ, ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರ ರಚಿಸಿದ್ದಾರೆ.
ಹಸೀನಾ ನಿರ್ಗಮನದ ಸುದ್ದಿ ಹರಡುತ್ತಿದ್ದಂತೆ ಅರಾಜಕತೆ ತಾಂಡವವಾಡುತ್ತಿದ್ದು, ಮತ್ತಷ್ಟು ಹಿಂಸಾಚಾರ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಉದ್ಯೋಗದಲ್ಲಿ ವಿವಾದಿತ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಜುಲೈ ಮಧ್ಯಭಾಗದಿಂದ ಈವರೆಗೆ 400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
'ಬಾಂಗ್ಲಾದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ದೇಶದಾದ್ಯಂತ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ’ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಣಾ ದಾಸ್‌ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಲ್ಪಸಂಖ್ಯಾತರ ಭದ್ರತೆಯನ್ನು ಖಚಿತಪಡಿಸಲು ಮತ್ತು ದಾಳಿ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ನಾವು ಸೇನೆಯನ್ನು ಒತ್ತಾಯಿಸುತ್ತೇವೆ‘ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.