ಕಠ್ಮಂಡು (ಪಿಟಿಐ): ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳ ಹಾರಾಟದ ವೇಳೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿದೆ. ಆಕಾಶದಲ್ಲಿ ಈ ಎರಡೂ ವಿಮಾನಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದಂತೆ ಪೈಲಟ್‌ಗಳಿಗೆ ರಾಡಾರ್ ಎಚ್ಚರಿಕೆ ಸಂದೇಶ ರವಾನಿಸಿದೆ. ಇದರಿಂದ ಅನಾಹುತ ತಪ್ಪಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಸಂಬಂಧ ಮೂವರು ವಾಯುಯಾನ ಸಂಚಾರ ನಿಯಂತ್ರಣ ಅಧಿಕಾರಿಗಳನ್ನು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ ಅಮಾನತುಗೊಳಿಸಿದೆ.
ಶುಕ್ರವಾರ ಬೆಳಿಗ್ಗೆ ನೇಪಾಳ ವಿಮಾನ ಕೌಲಾಲಂಪುರದಿಂದ ಕಠ್ಮಂಡುವಿಗೆ ಬರುತ್ತಿತ್ತು. ಏರ್ ಇಂಡಿಯಾ ವಿಮಾನವೂ ನವದೆಹಲಿಯಿಂದ ಕಠ್ಮಂಡುವಿನತ್ತ ಸಾಗುತ್ತಿತ್ತು.
ಏರ್ ಇಂಡಿಯಾ ವಿಮಾನವು 19 ಸಾವಿರ ಅಡಿ ಎತ್ತರದಲ್ಲಿ ಹಾಗೂ ನೇಪಾಳ ಏರ್‌ಲೈನ್ಸ್ ವಿಮಾನವು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಎರಡೂ ವಿಮಾನಗಳ ನಡುವಿನ ಅಂತರ ಕಡಿಮೆಯಿದ್ದ ಬಗ್ಗೆ ರಾಡಾರ್ ಎಚ್ಚರಿಕೆ ನೀಡಿದೆ. ಬಳಿಕ ನೇಪಾಳ ವಿಮಾನವನ್ನು 7 ಸಾವಿರ ಅಡಿ ಕೆಳಕ್ಕೆ ಹಾರುವಂತೆ ಮಾಡಲಾಯಿತು. ಇದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಲು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ಸಮಿತಿ ರಚಿಸಿದೆ. ಈ ಕುರಿತು ಭಾರತ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.