ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಶ್ರೀಲಂಕಾದ ಮಾಜಿಪೆಟ್ರೊಲಿಯಂ ಸಚಿವ ಅರ್ಜುನ ರಣತುಂಗ ಅವರನ್ನು ಒತ್ತೆಯಾಳುವನ್ನಾಗಿಸಲು ಯತ್ನಿಸಿದಾಗ ಅವರ ಅಂಗರಕ್ಷಕರು ಗುಂಡು ಹಾರಿಸಿದ ಘಟನೆ ಭಾನುವಾರ ನಡೆದಿದೆ.ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಗುಂಡು ಹಾರಾಟದಲ್ಲಿ ತೀವ್ರ ಗಾಯಗೊಂಡಿದ್ದ 34ರ ಹರೆಯದ ವ್ಯಕ್ತಿಯನ್ನು ಕೊಲಂಬೊ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆಯ ವಕ್ತಾರೆ ಪುಷ್ಪಾ ಸೋಯ್ಸಾ ಅವರ ಎಎಫ್‍ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ವಾರದಿಂದ ಶ್ರೀಲಂಕಾದಲ್ಲಿನ ರಾಜಕೀಯ ಬಿಕ್ಕಟ್ಟುತಲೆದೋರಿದ್ದು, ಇದೇ ಮೊದಲ ಬಾರಿ ಇಂಥದೊಂದು
ಘಟನೆ ನಡೆದಿದೆ.
ಕಳೆದ ಶುಕ್ರವಾರ ಉಂಟಾಗಿದ್ದ ರಾಜಕೀಯ ವಿದ್ಯಮಾನದಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು.ಇದರ ನಡುವೆಯೇ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ತನ್ನು ನ. 16ರವರೆಗೆ ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದ್ದರು.
ಆದರೆ ತಾನು ರಾಜೀನಾಮೆ ನೀಡುವುದಿಲ್ಲ. ಸಿರಿಸೇನಾ ಅವರ ನಡೆ ಅಕ್ರಮ ಮತ್ತು ಅಸಂವಿಧಾನಿಕ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
ವಿಕ್ರಮಸಿಂಘೆ ಅವರ ಆಪ್ತರಾಗಿರುವ ರಣತುಂಗಅವರು ಸೆಲಾನ್ ಪೆಟ್ರೋಲಿಯಂ ಕಾರ್ಪೊರೇಶನ್‍ನಲ್ಲಿರುವ ಕಚೇರಿಗೆ ಹೋಗುವ ಹೊತ್ತಲ್ಲಿ ಜನರ ಗುಂಪೊಂದು ಅವರನ್ನು ಒತ್ತೆಯಾಳು ಮಾಡಲು ಯತ್ನಿಸಿದಾಗ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.