ಲಂಡನ್ (ರಾಯಿಟರ್ಸ್): ಬ್ರಿಟನ್ ರಾಜಕುಮಾರಿ ಡಯಾನಾ ಅವರ ಜತೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಅವರ ಗೆಳೆಯ ಡೋಡಿ ಅಲ್ ಫಯೆದ್ ಅವರ ತಂದೆ, ಉದ್ಯಮಿ ಮೊಹಮದ್ ಅಲ್ ಫಯೆದ್ (94) ಅವರ ಅಂತ್ಯಕ್ರಿಯೆ ಶನಿವಾರ ನಡೆಯಿತು.
ಈಜಿಪ್ಟ್‌ನ ಕೋಟ್ಯಧಿಪತಿ ಮೊಹ್ಮದ್ ಅಲ್ ಫಯೆದ್ ಅವರು ಹ್ಯಾರೋಡ್ಸ್ ಡಿಪಾರ್ಟ್‌ಮೆಂಟ್ ಸ್ಟೋರ್ ಮಾಲೀಕ ಕೂಡ ಹೌದು. ಮೊಹಮದ್ ಅವರು ವಯೋಸಹಜವಾಗಿ ಮೃತಪಟ್ಟಿರುವುದಾಗಿ ಅವರ ಕುಟುಂಬ ತಿಳಿಸಿದೆ. ಅವರಿಗೆ ಪತ್ನಿ, ಮಕ್ಕಳು ಮೊಮ್ಮಕ್ಕಳು ಇದ್ದಾರೆ.
ಡೋಡಿ ಮತ್ತು ಡಯಾನಾ ಅವರು ಪ್ಯಾರಿಸ್‌ನಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟು 26 ವರ್ಷ ತುಂಬುವ ಒಂದು ದಿನ ಮೊದಲು, ಅಂದರೆ ಬುಧವಾರ ಮೊಹ್ಮದ್ ಅಲ್ ಫಯೆದ್ ನಿಧನರಾದರು.
ತನ್ನ ಮಗ ಡೋಡಿ ಅಲ್ ಫಯೆದ್ ಮತ್ತು ರಾಜಕುಮಾರಿ ಡಯಾನಾ ಸಾವಿನ ಹಿಂದೆ ಬ್ರಿಟನ್ ರಾಜಮನೆತನದ ಕೈವಾಡವಿರುವುದಾಗಿ ಮೊಹಮ್ಮದ್ ಅಲ್- ಫಯೆದ್, ಬ್ರಿಟನ್ ರಾಜಮನೆತದ ವಿರುದ್ಧ ಕೊಲೆ ಸಂಚಿನ ಆರೋಪವನ್ನು ನಿರಂತರ ಮಾಡಿದ್ದರು.
ಈಜಿಪ್ಟ್‌ನ ಲೆಕ್ಸಾಂಡ್ರೀಯ ನಗರದಲ್ಲಿ ಜನಿಸಿದ ಫಯೆದ್ ಅವರು ತಂಪು ಪಾನೀಯ ಮಾರಾಟ ಮತ್ತು ಹೊಲಿಗೆ ಯಂತ್ರ ಮಾರಾಟದಿಂದ ವೃತ್ತಿ ಜೀವನ ಆರಂಭಿಸಿದವರು. ನಂತರ ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ರಿಯಲ್ ಎಸ್ಟೇಟ್ ಮತ್ತು ಹಡಗು ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉದ್ಯಮಿಯಾಗಿ ರೂಪುಗೊಂಡರು. ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಹ್ಯಾರೋಡ್ಸ್, ಫುಲ್‌ಹಾಮ್ ಮತ್ತು ಪ್ಯಾರಿಸ್‌ನಲ್ಲಿರುವ ರಿಟ್ಜ್ ಹೋಟೆಲ್ ಮಾಲೀಕತ್ವ ಕೂಡ ಅಲ್ ಫಯೆದ್ ಅವರದೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.