ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ ಅಮೆರಿಕದಲ್ಲಿ ನೆಲೆಸಿರುವ ಬಾಂಗ್ಲಾ ಪ್ರಜೆಗಳು ಯೂನಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮೊಹಮ್ಮದ್ ಯೂನಸ್ ತಂಗಿರುವ ಹೊಟೇಲ್‌ನ ಎದುರು ಜಮಾಯಿಸಿರುವ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ಆಕ್ರೋಶ ಹೊರಹಾಕಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
‘ಮೊಹಮ್ಮದ್ ಯೂನಸ್ ಅವರು ಅಸಂವಿಧಾನಿಕವಾಗಿ, ಕಾನೂನುಬಾಹಿರವಾಗಿ ಅಧಿಕಾರವನ್ನು ಪಡೆದಿದ್ದಾರೆ. ಅವರು ಕೊಳಕು ರಾಜಕೀಯದಿಂದ ಅನೇಕರನ್ನು ಹತ್ಯೆ ಮಾಡಿ ಅಧಿಕಾರವನ್ನು ವಶಪಡಿಸಿಕೊಂಡಿದ್ದಾರೆ. ಶೇಖ್ ಹಸೀನಾ ಅವರೇ ನಮ್ಮ ಚುನಾಯಿತ ಪ್ರಧಾನಿ. ಬದಲಾಗಿ ಯೂನಸ್ ಅವರು ಬಾಂಗ್ಲಾದೇಶದ ಜನರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ನಾವು ವಿಶ್ವಸಂಸ್ಥೆಗೆ ವಿನಂತಿಸುತ್ತೇವೆ’ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಶೇಖ್ ಜಮಾಲ್ ಹುಸೇನ್ ತಿಳಿಸಿದ್ದಾರೆ.
‘ನಾವು ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಾಂಗ್ಲಾದಲ್ಲಿ ಯೂನಸ್ ಅವರು ಕಾನೂನುಬಾಹಿರವಾಗಿ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಲಾಗಿದೆ. ಬಾಂಗ್ಲಾದೇಶದಲ್ಲಿ ಪ್ರಜೆಗಳು ಸುರಕ್ಷಿತವಾಗಿಲ್ಲ’ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸರ್ಕಾರಿ ಉದ್ಯೋಗದಲ್ಲಿ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಬೃಹತ್ ಚಳವಳಿಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಶೇಖ್ ಹಸೀನಾ ಅವರು ಆ.5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾಗಿದ್ದರು.
ಹಸೀನಾ ಪದಚ್ಯುತಿಯ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಆ.8ರಂದು ಬಾಂಗ್ಲಾದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.