ಮನಾಡೋ: ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಎರಡು ದಿನಗಳ ಹಿಂದೆ ಜ್ವಾಲಾಮುಖಿ ಸ್ಟೋಟಗೊಂಡಿದ್ದು, ಇಲ್ಲಿಯವರೆಗೆ ಪರ್ವತದ ತಪ್ಪಲಿನಲ್ಲಿದ್ದ ಸುಮಾರು 1,200ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವದರಿಂದ ಸುನಾಮಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಪರ್ವತದ ಸುತ್ತಮುತ್ತ ಬಿಸಿ ಬೂದಿ ಹರಡುವ ಸಾಧ್ಯತೆಯೂ ಇದೆ. ಜ್ವಾಲಾಮುಖಿಗೆ ಬಂಡೆಗಳು ಜಾರುವ ಸಂಭವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದ್ದರಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ಮಧ್ಯಾಹ್ನದಿಂದ ಕನಿಷ್ಠ ಮೂರು ಬಾರಿ ಸ್ಟೋಟಗೊಂಡಿದೆ. ಲಾವಾ ಹಾಗೂ ಬಿಸಿ ಬೂದಿ 1,200 ಮೀಟರ್ ಎತ್ತರಕ್ಕೆ ಚಿಮ್ಮಿದೆ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಅಧ್ಯಯನ ಕೇಂದ್ರ ತಿಳಿಸಿದೆ.
‘ಜ್ವಾಲಾಮುಖಿ ಬೂದಿಯು ಪಶ್ಚಿಮ, ವಾಯುವ್ಯ, ಈಶಾನ್ಯ ಮತ್ತು ಆಗ್ನೇಯ ದಿಕ್ಕುಗಳಿಗೆ ಹರಡುತ್ತಿದೆ ಎಂದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ. ಜ್ವಾಲಾಮುಖಿ ಕುರಿತ ಬೆಳವಣಿಗೆಗಳ ಬಗ್ಗೆ ನಾವು ಮೇಲ್ವಿಚಾರಣೆ ಮಾಡುತ್ತಿದ್ದೆವೆ. ಸುರಕ್ಷತಾ ಕ್ರಮ, ಪುನರ್ವಸತಿ ಬಗ್ಗೆಯೂ ಕಾಳಜಿ ವಹಿಸಲಾಗಿದೆ’ ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಗುರುವಾರ ಉತ್ತರದ ಸುಲವೆಸಿ ದ್ವೀಪದಲ್ಲಿ ಜ್ವಾಲಾಮುಖಿ ಸ್ಟೋಟಗೊಂಡಿತ್ತು. ಲಾವಾ ಮತ್ತು ಬಿಸಿ ಬೂದಿ 3 ಕಿ.ಮೀ. ಎತ್ತರಕ್ಕೆ ಚಿಮ್ಮಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮನಾಡೋದಲ್ಲಿರುವ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.