ADVERTISEMENT

ಅಧಿಕ ತಾಪಮಾನ: ಹಜ್‌ ವೇಳೆ 1,300ಕ್ಕೂ ಅಧಿಕ ಮಂದಿ ಸಾವು

ಏಜೆನ್ಸೀಸ್
Published 24 ಜೂನ್ 2024, 14:27 IST
Last Updated 24 ಜೂನ್ 2024, 14:27 IST
<div class="paragraphs"><p>ಹಜ್‌ ಯಾತ್ರೆ ಕೈಗೊಂಡಿರುವ ವಿವಿಧ ದೇಶಗಳ ಯಾತ್ರಿಗಳು ಸೌದಿ ಅರೇಬಿಯಾದ ಮೆಕ್ಕಾದ ಬೃಹತ್‌ ಮಸೀದಿ ‘ಕಾಬಾ‘ ಶಿಲೆಗೆ ಪ್ರದಕ್ಷಿಣೆ ಹಾಕಿದರು ( ಸಂಗ್ರಹ ಚಿತ್ರ)</p></div>

ಹಜ್‌ ಯಾತ್ರೆ ಕೈಗೊಂಡಿರುವ ವಿವಿಧ ದೇಶಗಳ ಯಾತ್ರಿಗಳು ಸೌದಿ ಅರೇಬಿಯಾದ ಮೆಕ್ಕಾದ ಬೃಹತ್‌ ಮಸೀದಿ ‘ಕಾಬಾ‘ ಶಿಲೆಗೆ ಪ್ರದಕ್ಷಿಣೆ ಹಾಕಿದರು ( ಸಂಗ್ರಹ ಚಿತ್ರ)

   

– ರಾಯಿಟರ್ಸ್‌ ಚಿತ್ರ

ಕೈರೊ: ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 1,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

‘ಹಜ್‌ ಯಾತ್ರೆಯ ವೇಳೆ ಒಟ್ಟು 1,301 ಮಂದಿ ಮೃತಪಟ್ಟಿದ್ದು, ಅದರಲ್ಲಿ ಶೇ 83 ರಷ್ಟು ಮಂದಿ ‘ಅನಧಿಕೃತ ಯಾತ್ರಿ’ಗಳಾಗಿದ್ದಾರೆ. ಅವರು ಯಾತ್ರೆಯ ವಿಧಿ ವಿಧಾನಗಳನ್ನು ಪೂರೈಸಲು ಮೆಕ್ಕಾ ನಗರ ಹಾಗೂ ಹೊರವಲಯದಲ್ಲಿ ಸುಮಾರು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಈ ವೇಳೆ ಬಿಸಿಲಿನ ತಾಪಕ್ಕೆ ಬಳಲಿದ್ದಾರೆ’ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವ ಫಹದ್ ಬಿನ್ ಅಬ್ದುರ್ರಹ್ಮಾನ್ ಅಲ್‌–ಜಲಾಜಿಲ್‌ ಭಾನುವಾರ ಹೇಳಿದ್ದಾರೆ.

‘95 ಯಾತ್ರಿಗಳು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಬಹುತೇಕ ಮಂದಿಯ ಬಳಿ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅವರ ಗುರುತು ಪತ್ತೆಹಚ್ಚುವ ಪ್ರಕ್ರಿಯೆ ತಡವಾಗಿದೆ. ಮೃತದೇಹಗಳನ್ನು ಮೆಕ್ಕಾದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಈಜಿಪ್ಟ್‌ನ 660 ಮಂದಿ ಸಾವು: ಹಜ್‌ ಯಾತ್ರೆ ವೇಳೆ ಈಜಿಪ್ಟ್‌ನ 660 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 31 ಮಂದಿ ಅನಧಿಕೃತವಾಗಿ ಯಾತ್ರೆಯಲ್ಲಿ ಪಾಲ್ಗೊಂಡವರು ಎಂದು ಕೈರೊದ ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿಕರಿಗೆ ಅನಧಿಕೃತವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಅನುವು ಮಾಡಿಕೊಟ್ಟ 16 ಟ್ರಾವೆಲ್ ಏಜೆನ್ಸಿಗಳ ಪರವಾನಗಿಯನ್ನು ಈಜಿಪ್ಟ್ ಸರ್ಕಾರ ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

ಹಜ್‌ ಯಾತ್ರಿಕರು ಅನಧಿಕೃತವಾಗಿ ಪ್ರವೇಶಿಸುವುದನ್ನು ತಡೆಯಲು ಸೌದಿ ಅರೇಬಿಯಾದ ಅಧಿಕಾರಿಗಳು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಸೂಕ್ತ ದಾಖಲೆಗಳಿಲ್ಲದ ಸಾವಿರಾರು ಮಂದಿಯನ್ನು ವಾಪಸ್‌ ಕಳುಹಿಸಿದ್ದರು. ಆದರೂ ಈಜಿಪ್ಟ್‌ನ ನೂರಾರು ಮಂದಿ ಅಧಿಕಾರಿಗಳ ಕಣ್ಣುತಪ್ಪಿಸಿ ಮಕ್ಕಾ ತಲುಪಿದ್ದರು. ವಾಸ್ತವ್ಯ ಹೂಡಲು ಹೋಟೆಲ್‌ ಕೊಠಡಿಗಳು ಸೇರಿದಂತೆ ಅಧಿಕೃತ ಯಾತ್ರಾತ್ರಿಗಳಿಗೆ ಸಿಗುವ ಸೌಲಭ್ಯಗಳು ಅವರಿಗೆ ಲಭಿಸಿಲ್ಲ. 

ಇಂಡೊನೇಷ್ಯಾದ 165, ಭಾರತದ 98 ಯಾತ್ರಿಗಳು ಅಲ್ಲದೆ ಜೋರ್ಡನ್, ಟ್ಯುನೀಷ್ಯಾ, ಮೊರೊಕ್ಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ 10ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದಾರೆ. ಅಮೆರಿಕದ ಇಬ್ಬರು ಯಾತ್ರಿಕರು ಮೃತರಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.