ಮಾರುಕೇಶ್, ಮೊರೊಕ್ಕೊ: ತೀವ್ರ ಭೂಕಂಪನ ಸಂಭವಿಸಿದ್ದ ಮೊರೊಕ್ಕೊದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 2,100ರ ಗಡಿ ದಾಟಿದೆ.
ಮೊರೊಕ್ಕೊವಿನ ಒಳಾಡಳಿತ ಸಚಿವಾಲಯದ ಪ್ರಕಾರ, ಶನಿವಾರ ಮೃತರ ಸಂಖ್ಯೆ ಶನಿವಾರ 2,122ಕ್ಕೆ ತಲುಪಿತ್ತು. ಅವಶೇಷಗಳಡಿ ಸಿಲುಕಿದವರ ಶೋಧ ಕಾರ್ಯ ನಡೆದಿದೆ. ಮೃತರ ಸಂಖ್ಯೆಯು ಇನ್ನಷ್ಟು ಏರಬಹುದು.
ಗರಿಷ್ಠ ಸಂಖ್ಯೆಯಲ್ಲಿ ಅಲ್ ಹೌಜ್ ಪ್ರಾಂತ್ಯದಲ್ಲಿ ಅಂದರೆ, ಸುಮಾರು 1,293 ಜನ ಸತ್ತಿದ್ದರೆ, ಟರೌಡಂಟ್‌ನಲ್ಲಿ 452 ಜನರು ಸತ್ತಿದ್ದಾರೆ. 2,059 ಜನರು ಗಾಯಗೊಂಡಿದ್ದು, ಈ ಪೈಕಿ 1,404 ಜನರ ಸ್ಥಿತಿಯು ಗಂಭೀರವಾಗಿದೆ.
ಪ್ರಾಕೃತಿಕ ವಿಕೋಪದ ಹಿನ್ನೆಲೆ ಹಾಗೂ ಮೃತರ ಗೌರವಾರ್ಥ ಸರ್ಕಾರ ಮೂರು ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ಉತ್ತರ ಆಫ್ರಿಕಾದ ದೇಶ ಮೊರೊಕ್ಕೊದಲ್ಲಿ ಶುಕ್ರವಾರ ರಾತ್ರಿ 6.8 ತೀವ್ರತೆಯ ಭೂಕಂಪನ ಬಾಧಿಸಿತ್ತು. 120 ವರ್ಷದ ಇತಿಹಾಸದಲ್ಲೇ ಇದು ಗಂಭೀರವಾದುದು.
ನೆರವಿಗೆ ಎಂಎಸ್‌ಎಫ್ ಸಜ್ಜು: ಡಾಕ್ಟರ್ಸ್ ವಿತ್‌ಔಟ್ ಬಾರ್ಡರ್ಸ್ ಅಥವಾ ಎಂಎಸ್‌ಎಫ್ ಸಂಘಟನೆಯು ಕೂಡಾ ಭೂಕಂಪನ ಪೀಡಿತ ಮೊರೊಕ್ಕೊದಲ್ಲಿ ಅಗತ್ಯ ನೆರವು ಒದಗಿಸಲು ಸಜ್ಜಾಗಿದ್ದೇವೆ ಎಂದು ಭರವಸೆ ನೀಡಿದೆ.
ಪೋಪ್ ಕಳವಳ: ಪೋಪ್ ಫ್ರಾನ್ಸಿಸ್ ಅವರು, ಪ್ರಕೃತಿ ವಿಕೋಪದ ಪರಿಣಾಮ ಕುರಿತು ಕಳವಳ ವ್ಯಕ್ತಪಡಿಸಿದ್ದು, ಬಾಧಿತ ಜನರ ಜೊತೆಗೆ ನಾವಿದ್ದೇವೆ ಎಂದಿದ್ದಾರೆ ಫ್ರಾನ್ಸಿಸ್ ಅವರು 2019ರಲ್ಲಿ ಮೊರೊಕ್ಕೊಗೆ ಭೇಟಿ ನೀಡಿದ್ದರು.
ನೆರವಿನ ಅಭಯ: ಭೂಕಂಪನದ ತೀವ್ರತೆ, ಸಾವು ನೋವು ಕುರಿತು ಕಳವಳ ವ್ಯಕ್ತಪಡಿಸಿರುವ ವಿವಿಧ ದೇಶಗಳ ಮುಖಂಡರು, ಮೊರೊಕ್ಕೊಗೆ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿವೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ‘ಮೊರೊಕ್ಕೊ ಆಡಳಿತದ ಜೊತೆಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ’ ಎಂದಿದ್ದಾರೆ. ಭೂಕಂಪನದಲ್ಲಿ ಇದೇ ವರ್ಷ ಅಸಂಖ್ಯ ಜನರ ಕಳೆದುಕೊಂಡಿದ್ದ ಟರ್ಕಿಯೆ ಕೂಡಾ ನೆರವಿನ ಅಭಯ ನೀಡಿದೆ. ಫ್ರಾನ್ಸ್, ಜರ್ಮನಿ, ಇಸ್ರೇಲ್ ದೇಶಗಳೂ ನೆರವಿಗೆ ಮುಂದೆಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.