ಕೀವ್: ‘ಉಕ್ರೇನ್ ಪಡೆಗಳು ದೇಶದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಾತ್ರಿಯಿಡಿ ಭಾರಿ ಸಂಖ್ಯೆಯ ಡ್ರೋನ್‌ಗಳಿಂದ ದಾಳಿ ನಡೆಸಿದೆ. ದಾಳಿ ಪರಿಣಾಮ ಮನೆಯೊಂದು ಹೊತ್ತಿ ಉರಿದು ಇಬ್ಬರು ಮೃತಪಟ್ಟಿದ್ದಾರೆ’ ಎಂದು ರಷ್ಯಾ ಶನಿವಾರ ತಿಳಿಸಿದೆ.
‘ಉಕ್ರೇನ್ ಗಡಿಗೆ ಸಮೀಪದಲ್ಲಿರುವ ಬೆಲ್ಗೊರೊಡ್‌ನ ಪಶ್ಚಿಮ ಭಾಗದಲ್ಲಿ 26 ಡ್ರೋನ್‌ಗಳು ಸೇರಿದಂತೆ ದೇಶದ ಎಂಟು ಪ್ರದೇಶಗಳಲ್ಲಿ ಒಟ್ಟು 50 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.
‘ಡ್ರೋನ್‌ಗಳ ನಿರಂತರ ದಾಳಿ ಪರಿಣಾಮ ಮನೆಯೊಂದು ಹೊತ್ತಿ ಉರಿದಿದೆ. ಕಾಲು ಮುರಿತದಿಂದ ಬಳಲುತ್ತಿದ್ದ ಮಹಿಳೆ ಹಾಗೂ ಆಕೆಯ ಆರೈಕೆ ಮಾಡುತ್ತಿದ್ದ ವ್ಯಕ್ತಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಬೆಲ್ಗೊರೊಡ್ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಮಾಸ್ಕೊ ಪ್ರದೇಶ, ಬ್ರ್ಯಾನ್ಸ್‌ಕ್, ಕುರ್ಸ್‌ಕ್, ಸ್ಮೊಲೆನ್ಸ್‌ಕ್, ರ‍್ಯಾಝನ್, ಕಲುಗಾ ಸೇರಿದಂತೆ ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದ ವಿವಿಧೆಡೆಯೂ ಉಕ್ರೇನ್‌ನ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾ ಮೇಲೆ ಡ್ರೋನ್ ದಾಳಿ ನಡೆಸಿರುವ ಕುರಿತು ಉಕ್ರೇನ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಾಳಿ ಭೀತಿ: ರಷ್ಯಾ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವ ಕಾರಣ, ಆತಂಕಗೊಂಡಿರುವ ಉಕ್ರೇನ್‌ನ ಹಾರ್ಕಿವ್ ಹಾಗೂ ಸುತ್ತಲಿನ ಪ್ರದೇಶಗಳ ನಿವಾಸಿಗಳು ಮನೆಗಳನ್ನು ತೊರೆಯುತ್ತಿದ್ದಾರೆ.
ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಈಗಾಗಲೇ ರಷ್ಯಾ ದಾಳಿ ನಡೆಸಿದ್ದರಿಂದ, ದೇಶದ ಎರಡನೇ ದೊಡ್ಡ ನಗರವಾಗಿರುವ ಹಾರ್ಕಿವ್‌ನ ಬಹುತೇಕ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ.
ಇನ್ನೂ, ಕೆಲವೆಡೆ ವಿದ್ಯುತ್ ನಿಲುಗಡೆಯಿಂದಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.