ಮಾಸ್ಕೊ: ಮಾಸ್ಕೊದಲ್ಲಿ ಸಂಗೀತ ಕಾರ್ಯಕ್ರಮವೊಂದು ನಡೆಯಬೇಕಿದ್ದ ಕ್ರಾಕಸ್ ಸಿಟಿ ಹಾಲ್ ಸಭಾಂಗಣದ ಮೇಲೆ ಶುಕ್ರವಾರ ತಡರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ 133 ಮಂದಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಷ್ಯಾದ ಅಧಿಕಾರಿಗಳು 11 ಮಂದಿ ಯನ್ನು ಶನಿವಾರ ವಶಕ್ಕೆ ತೆಗೆದು ಕೊಂಡಿದ್ದಾರೆ.
ಶಂಕಿತರ ಪೈಕಿ ನಾಲ್ಕು ಮಂದಿ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂದು ರಷ್ಯಾದ ತನಿಖಾ ಸಮಿತಿ ಹೇಳಿದೆ. ದಾಳಿಗೆ ತಾನು ಹೊಣೆ ಎಂದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೊಂಡಿದೆ. ಆದರೆ ದಾಳಿಗೆ ಉಕ್ರೇನ್ ನಂಟು ಇದೆ ಎಂಬ ಅರ್ಥದ ಮಾತುಗಳನ್ನು ರಷ್ಯಾದ ತನಿಖಾ ಸಂಸ್ಥೆಗಳು ಹೇಳಿವೆ.
ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಎಂಬುದನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ ಎಂದು ಅಮೆರಿಕದ ಗುಪ್ತದಳದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಾಲ್ಕು ಮಂದಿ ಶಂಕಿತರನ್ನು ಪಶ್ಚಿಮ ರಷ್ಯಾದ ಬ್ರ್ಯಾನ್‌ಸ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಇದು ಉಕ್ರೇನ್ ಗಡಿಯಿಂದ ಹೆಚ್ಚೇನೂ ದೂರದಲ್ಲಿ ಇಲ್ಲ ಎಂದು ಸಮಿತಿಯು ಹೇಳಿದೆ. ಶಂಕಿತರು ಗಡಿದಾಟಿ ಉಕ್ರೇನ್ ಪ್ರವೇಶಿಸುವ ಉದ್ದೇಶ ಹೊಂದಿದ್ದರು, ಅಲ್ಲಿನವರ ಜೊತೆ ಅವರಿಗೆ ನಂಟು ಇದೆ ಎಂದು ರಷ್ಯಾದ ಅಧಿಕಾರಿಗಳನ್ನು ಉಲ್ಲೇಖಿಸಿ ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಟಾಸ್ ವರದಿ ಮಾಡಿದೆ. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಮುಖ್ಯಸ್ಥರು ಈ ಬಂಧನದ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ವಿವರ ನೀಡಿದ್ದಾರೆ ಎಂದು ಕೂಡ ಅದು ವರದಿ ಮಾಡಿದೆ.
ಹೊಣೆ ಹೊತ್ತ ಐಸಿಸ್: ರಷ್ಯಾ ರಾಜಧಾನಿ ಮಾಸ್ಕೊದ ಕನ್ಸರ್ಟ್ ಹಾಲ್‌ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಆದರೂ ದಾಳಿಯಲ್ಲಿ ಉಕ್ರೇನ್ ಪಾತ್ರವಿದೆ ಎಂದು ರಷ್ಯಾದ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.