ಬಾಕೂ (ಅಜರ್‌ಬೈಜಾನ್): ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ‘ಜಿ20’ ಗುಂಪಿನ ಬಹುತೇಕ ಸದಸ್ಯ ದೇಶಗಳು ಹವಾಮಾನ ಕ್ರಿಯಾಯೋಜನೆಗಳನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ ಎಂಬುದನ್ನು ವಿಶ್ವಸಂಸ್ಥೆಯ ಹವಾಮಾನ ಮಾತುಕತೆ ‘ಸಿಒಪಿ29’ ಕಾರ್ಯಕ್ರಮದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಹವಾಮಾನ ಉತ್ತರದಾಯಿತ್ವ ಸೂಚ್ಯಂಕವು ಹೇಳಿದೆ.
ಹವಾಮಾನ ಬದಲಾವಣೆಯ ವಿಚಾರವಾಗಿ ವಿವಿಧ ದೇಶಗಳ ಸಾಧನೆಯನ್ನು ವಿಶ್ಲೇಷಿಸುವ ಉದ್ದೇಶದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ‘ಜಾಗತಿಕ ದಕ್ಷಿಣ’ದ ದೇಶಗಳು ಈ ವಿನೂತನ ಸೂಚ್ಯಂಕವನ್ನು ಸಿದ್ಧಪಡಿಸಿವೆ.
‘ಜಾಗತಿಕ ದಕ್ಷಿಣ’ದ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಹವಾಮಾನ ಬದಲಾವಣೆಯನ್ನು ತಡೆಯುವ ದಿಸೆಯಲ್ಲಿ ಮಹತ್ವದ ಪ್ರಯತ್ನಗಳನ್ನು ಕೈಗೊಂಡಿವೆ ಎಂಬುದನ್ನು ಸೂಚ್ಯಂಕದಲ್ಲಿ ವಿವರಿಸಲಾಗಿದೆ. ಇದನ್ನು ನವದೆಹಲಿ ಮೂಲದ ‘ಇಂಧನ, ಪರಿಸರ ಮತ್ತು ಜಲ ಮಂಡಳಿ’ (ಸಿಇಇಡಬ್ಲ್ಯು) ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಪ್ರಮುಖ ಒಪ್ಪಂದಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ, ಅವು ತಮ್ಮ ಹೊಣೆಗಾರಿಕೆಗೆ ಬದ್ಧವಾಗಿ ನಡೆದುಕೊಂಡಿವೆ ಎಂದು ಇದರಲ್ಲಿ ಹೇಳಲಾಗಿದೆ.
ಅಜರ್‌ಬೈಜಾನ್ ದೇಶದ ರಾಜಧಾನಿಯಲ್ಲಿ 190ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಹವಾಮಾನ ಸಂಬಂಧಿ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ. ‘ಮುಂದುವರಿದ ದೇಶಗಳು ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಹಿಂದೆಬಿದ್ದಿವೆ’ ಎಂದು ಸಿಇಇಡಬ್ಲ್ಯು ಸಂಸ್ಥೆಯ ಸಿಇಒ ಅರುನಭಾ ಘೋಷ್ ಹೇಳಿದ್ದಾರೆ.
‘ಸಿಒಪಿ29 ಕಾರ್ಯಕ್ರಮವು ಉತ್ತರದಾಯಿತ್ವಕ್ಕೆ ಒತ್ತು ನೀಡಬೇಕು. ಅಭಿವೃದ್ಧಿ ಹೊಂದಿರುವ ದೇಶಗಳು ಇತಿಹಾಸದುದ್ದಕ್ಕೂ ಅತಿಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕಾರಕಗಳನ್ನು ಹೊರಸೂಸುವ ಕೆಲಸ ಮಾಡಿವೆ. ಅವು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಕೆಲಸಕ್ಕೆ ವೇಗ ನೀಡಬೇಕು. ಇದರ ಜೊತೆಯಲ್ಲೇ, ಹವಾಮಾನ ಬದಲಾವಣೆಯನ್ನು ತಡೆಯುವ ಯತ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಬೇಕು’ ಎಂದು ಘೋಷ್ ಒತ್ತಾಯಿಸಿದ್ದಾರೆ.
ಮಾಲಿನ್ಯಕಾರಕಗಳನ್ನು ಹೊರಸೂಸುವಲ್ಲಿ ಮುಂಚೂಣಿಯಲ್ಲಿ ಇರುವ, ಮುಂದುವರಿದ ದೇಶಗಳಾದ ಅಮೆರಿಕ ಮತ್ತು ಕೆನಡಾ ಹವಾಮಾನ ಒಪ್ಪಂದದ ವಿಚಾರದಲ್ಲಿ ಸ್ಥಿರ ಧೋರಣೆ ತೋರಿಸುತ್ತಿಲ್ಲ. ಇದರಿಂದಾಗಿ ಈ ದೇಶಗಳ ಬದ್ಧತೆಯ ವಿಚಾರವಾಗಿ ಅನುಮಾನಗಳು ಮೂಡುತ್ತವೆ ಎಂದು ಸೂಚ್ಯಂಕವು ಹೇಳಿದೆ.
ಗ್ರೆಟಾ ಪ್ರತಿಭಟನೆ
ಟುಬುಲೀಸೀ (ಜಾರ್ಜಿಯಾ) (ಎಪಿ): ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಮಾತುಕತೆಗೆ ಅಜರ್‌ಬೈಜಾನ್ ಆತಿಥ್ಯ ವಹಿಸಿರುವುದನ್ನು ಖಂಡಿಸಿ ಜಾರ್ಜಿಯಾದಲ್ಲಿ ಸೋಮವಾರ ನಡೆದ ರ್‍ಯಾಲಿಯಲ್ಲಿ ಗ್ರೆಟಾ ಟುನ್‌ಬರ್ಗ್ ಭಾಗಿಯಾಗಿದ್ದರು. ಜಾರ್ಜಿಯಾ ದೇಶದ ರಾಜಧಾನಿ ಟುಬುಲೀಸೀಯಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಟುನ್‌ಬರ್ಗ್ ಹಾಗೂ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಜುಬೈಜಾನ್ ದೇಶವು ದಮನಕಾರಿ ನೀತಿಗಳನ್ನು ಪಾಲಿಸುತ್ತಿರುವ ಕಾರಣ ಹವಾಮಾನ ಮಾತುಕತೆಗೆ ಆತಿಥ್ಯ ವಹಿಸುವ ಅರ್ಹತೆ ಅದಕ್ಕೆ ಇಲ್ಲ ಎಂದು ಅವರು ಹೇಳಿದರು. ‘ಸಿಒಪಿ29’ ಹೆಸರಿನ ಹವಾಮಾನ ಮಾತುಕತೆಯು ಅಜರ್‌ಬೈಜಾನ್ ದೇಶದ ರಾಜಧಾನಿ ಬಾಕೂವಿನಲ್ಲಿ ಸೋಮವಾರ ಶುರುವಾಗಿದೆ. ಈ ದೇಶವು ಜಗತ್ತಿನ ತೈಲ ಉತ್ಪಾದಕ ದೇಶಗಳ ಪೈಕಿ ಪ್ರಮುಖವಾಗಿದೆ. ಜಗತ್ತಿನ ಮೊದಲ ತೈಲ ಬಾವಿಯನ್ನು ಕೊರೆದಿದ್ದು ಇದೇ ದೇಶದಲ್ಲಿ. ‘ಅಜರ್‌ಬೈಜಾನ್ ದೇಶವು ದಮನಕಾರಿಯಾಗಿದೆ ಅದು ಜನಾಂಗೀಯ ನಿರ್ಮೂಲನೆಯ ಕೃತ್ಯ ಎಸಗಿದೆ’ ಎಂದು ಗ್ರೆಟಾ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.