ADVERTISEMENT

ಯಾತ್ರೆ ಹೆಸರಲ್ಲಿ ಸೌದಿಗೆ ಭೇಟಿ: ಬಹುತೇಕ ಪಾಕ್‌ ಪ್ರಜೆಗಳಿಂದ ಭಿಕ್ಷಾಟನೆ

ಪಾಕ್‌ ಸಂಸದೀಯ ಸ್ಥಾಯಿ ಸಮಿತಿಗೆ ಅಧಿಕಾರಿಗಳ ಮಾಹಿತಿ

ಪಿಟಿಐ
Published 28 ಸೆಪ್ಟೆಂಬರ್ 2023, 15:47 IST
Last Updated 28 ಸೆಪ್ಟೆಂಬರ್ 2023, 15:47 IST
-
-   

ಇಸ್ಲಾಮಾಬಾದ್: ಯಾತ್ರೆ ಹೆಸರಿನಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ಪಾಕಿಸ್ತಾನಿಯರ ಪೈಕಿ ಬಹುತೇಕರು ಭಿಕ್ಷೆ ಬೇಡುತ್ತಾರೆ. ಸೌದಿ ಅ‌ರೇಬಿಯಾ ಮತ್ತಿತರ ದೇಶಗಳ ಜೈಲುಗಳು ಇಂಥ ಪ್ರವಾಸಿಗರಿಂದ ತುಂಬಿವೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ಸಂಸತ್‌ನ ಸ್ಥಾಯಿ ಸಮಿತಿಯೊಂದಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.

‘ಪಾಕಿಸ್ತಾನದ ಭಿಕ್ಷುಕರು ಯಾತ್ರೆಗೆ (ಜಿಯಾರತ್) ತೆರಳುವುದಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುತ್ತಾರೆ. ಈ ಪೈಕಿ ಬಹುತೇಕ ಜನರು ‘ಉಮ್ರಾಹ್’ ವೀಸಾದಡಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ, ಭಿಕ್ಷೆ ಬೇಡುತ್ತಾರೆ‘ ಎಂದು ಸಂಸತ್‌ ಕಾರ್ಯದರ್ಶಿ (ಸಾಗರೋತ್ತರ ಪಾಕಿಸ್ತಾನಿಯರ ವಿಭಾಗ) ಜೀಶನ್‌ ಖಾನ್‌ಜಾದಾ ಅವರು ಸಾಗರೋತ್ತರ ಪಾಕಿಸ್ತಾನಿಯರಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ.

‘ಮೆಕ್ಕಾದ ಮಸೀದಿ ಬಳಿ ಬಂಧಿಸಲಾಗುವ ಕಿಸೆಗಳ್ಳರ ಪೈಕಿ ಬಹುತೇಕರು ಪಾಕಿಸ್ತಾನ ಪ್ರಜೆಗಳೇ ಆಗಿದ್ದಾರೆ’ ಎಂಬ ಜೀಶನ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಟರ್‌ನ್ಯಾಷನಲ್ ನ್ಯೂಸ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

‘ಪಾಕಿಸ್ತಾನದ ಭಿಕ್ಷುಕರಿಂದ ತಮ್ಮ ಜೈಲುಗಳು ತುಂಬಿಹೋಗಿವೆ ಎಂದು ಇರಾಕ್‌ ಮತ್ತು ಸೌದಿ ಅರೇಬಿಯಾ ರಾಯಭಾರಿಗಳು ದೂರಿದ್ದಾರೆ ಎಂಬುದಾಗಿ ಜೀಶನ್‌ ಅವರು ಸ್ಥಾಯಿ ಸಮಿತಿಗೆ ತಿಳಿಸಿದ್ದಾರೆ’ ಎಂದೂ ಪತ್ರಿಕೆ ವರದಿ ಮಾಡಿದೆ.

‘ಈ ವಿಷಯವು ಮಾನವ ಕಳ್ಳಸಾಗಣೆ ಎಂದೇ ಪರಿಗಣಿತವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ಯುಎಇಯಲ್ಲಿ 16 ಲಕ್ಷ ಹಾಗೂ ಕತಾರ್‌ನಲ್ಲಿ 2 ಲಕ್ಷ ಪಾಕಿಸ್ತಾನ ಪ್ರಜೆಗಳು ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.