ಕೊಲಂಬೊ: 250 ಜನರನ್ನು ಬಲಿ ಪಡೆದ, ಈಸ್ಟರ್ ಭಾನುವಾರ ನಡೆದ ಆತ್ಮಾಹುತಿ ದಾಳಿಗೆ ‘ಮದರ್ ಆಫ್ ಸೈತಾನ್’ ಎಂಬ ಸ್ಫೋಟಕವನ್ನು ಬಳಸಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ನೆರವಿನಿಂದ ಈ ಸ್ಫೋಟಕವನ್ನು ಸಿದ್ಧಪಡಿಸಲಾಗಿದೆ. ಇಂತಹ ಸ್ಫೋಟಕ ಬಳಕೆಯೇ ಇದು ಐಎಸ್ ಉಗ್ರ ಸಂಘಟನೆ ಕೃತ್ಯ ಎಂಬುದನ್ನು ಹೇಳುತ್ತದೆ ಎಂದು ಆತ್ಮಾಹುತಿ ದಾಳಿ ಕುರಿತಂತೆ ತನಿಖೆ ಕೈಗೊಂಡಿರುವ ಅಧಿಕಾರಿಗಳು ವಿವರಿಸಿದ್ದಾರೆ.
‘ಟ್ರೈ ಎಸಿಟೋನ್ ಟ್ರೈಪೆರಾಕ್ಸೈಡ್’ ಅಥವಾ ‘ಟಿಎಟಿಪಿ’ ಎಂಬ ರಾಸಾಯನಿಕವನ್ನು ಬಳಸಿ ಈ ಸ್ಫೋಟಕವನ್ನು ತಯಾರಿಸಲಾಗಿದೆ. ಇದಕ್ಕೆ ಐಎಸ್ ಉಗ್ರರು ‘ಮದರ್ ಆಫ್ ಸೈತಾನ್’ ಎಂದು ಕರೆಯುತ್ತಾರೆ. ನ್ಯಾಷನಲ್ ತೌಹೀದ್ ಜಮಾತ್ (ಎನ್‌ಟಿಜೆ) ದಾಳಿಯ ಹೊಣೆ ಹೊತ್ತಿದ್ದು, ಬಾಂಬ್ ತಯಾರಿಸಲು ಈ ಸಂಘಟನೆಯ ಉಗ್ರರಿಗೆ ವಿದೇಶಿಯರು ನೆರವು ನೀಡಿದ್ದಾರೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ದಾಳಿ, 2017ರಲ್ಲಿ ಬ್ರಿಟನ್‌ನ ಮ್ಯಾಂಚೆಸ್ಟರ್ ಅರೇನಾದಲ್ಲಿ ನಡೆದ ಆತ್ಮಾಹುತಿ ದಾಳಿ ಹಾಗೂ ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಯಲ್ಲಿ ‘ಟಿಎಟಿಪಿ’ ಬಳಸಲಾಗಿತ್ತು.
ಆತ್ಮಾಹುತಿ ಬಾಂಬ್ ದಾಳಿ ಕುರಿತಂತೆ ಶ್ರೀಲಂಕಾ ಕೈಗೊಂಡಿರುವ ತನಿಖೆಗೆ ಅಮೆರಿಕದ ಎಫ್‌ಬಿಐ ಜೊತೆಗೆ ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಭಾರತ ಸೇರಿದಂತೆ ಎಂಟು ದೇಶಗಳು ವಿಧಿವಿಜ್ಞಾನ ಹಾಗೂ ತಾಂತ್ರಿಕ ನೆರವು ನೀಡುತ್ತಿವೆ.
ಎನ್‌ಟಿಜೆ ಮುಖಂಡನ ಸಾವು ದೃಢಪಡಿಸಿದ ಡಿಎನ್‌ಎ ಪರೀಕ್ಷೆ
ಈಸ್ಟರ್ ಭಾನುವಾರ ನಡೆದ ಆತ್ಮಾಹುತಿ ದಾಳಿ ಹೊಣೆ ಹೊತ್ತಿರುವ ನ್ಯಾಷನಲ್ ತೌಹೀದ್ ಜಮಾತ್‌ನ (ಎನ್‌ಟಿಜೆ) ಸ್ಥಳೀಯ ಮುಖಂಡ ಜಹ್ರಾನ್ ಕಾಸಿಂ ಸಹ ಇದೇ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಹ್ರಾನ್ ಈ ದಾಳಿಯ ಸೂತ್ರಧಾರಿಯಾಗಿದ್ದು, ಶಾಂಗ್ರಿಲಾ ಹೋಟೆಲ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿಯೇ ಈತ ಮೃತಪಟ್ಟಿದ್ದಾನೆ ಎಂಬುದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ. ಜಹ್ರಾನ್ ಪತ್ನಿ, ಪುತ್ರಿ ಹಾಗೂ ಸಹೋದರನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿರುವ ಅಧಿಕಾರಿಗಳು, ಇದೇ ದಾಳಿಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಉಗ್ರ ಇಬ್ರಾಹಿಂ ಅಹ್ಮದ್ ತನ್ನನ್ನೇ ಸ್ಫೋಟಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.