ADVERTISEMENT

ಎವರೆಸ್ಟ್‌ ಪರ್ವತದಲ್ಲಿ 11 ಟನ್‌ ಕಸ!

ಪಿಟಿಐ
Published 6 ಜುಲೈ 2024, 13:50 IST
Last Updated 6 ಜುಲೈ 2024, 13:50 IST
<div class="paragraphs"><p>ಎವರೆಸ್ಟ್‌ ಪರ್ವತದಿಂದ ಹೊರತೆಗೆದ ಕಸವನ್ನು ಬೇರ್ಪಡಿಸಿದ ಕಾರ್ಮಿಕರು&nbsp;</p></div>

ಎವರೆಸ್ಟ್‌ ಪರ್ವತದಿಂದ ಹೊರತೆಗೆದ ಕಸವನ್ನು ಬೇರ್ಪಡಿಸಿದ ಕಾರ್ಮಿಕರು 

   

ಜಗತ್ತಿನ ಅತಿ ಎತ್ತರದ, ‘ಜಗತ್ತಿನ ಛಾವಣಿ’ ಎನಿಸಿಕೊಂಡಿರುವ, ಚಾರಣಿಗರ ಸಾಹಸ ಕಥೆಗಳಿಗೆ ಸ್ಫೂರ್ತಿಯಾಗಿರುವ ಎವರೆಸ್ಟ್‌ ಪರ್ವತವು ಈಗ ಕಸದ ಮಡುವಿನಲ್ಲಿದೆ. 11 ಟನ್‌ ಕಸವನ್ನು ಈಗ ಹೊರತೆಗೆಯಲಾಗಿದೆ!

ಈ ಪರ್ವತದಲ್ಲಿನ ಕಸವನ್ನು ತೆಗೆದುಹಾಕಲು ಹಲವು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

ADVERTISEMENT

ನೇಪಾಳ ಸರ್ಕಾರ ಹಾಗೂ ಹಲವು ಸರ್ಕಾರೇತರ ಸಂಸ್ಥೆಗಳು ಎವರೆಸ್ಟ್‌ ಪರ್ವತವನ್ನು ಸ್ವಚ್ಛ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ. 1991ರಿಂದ ‘ಸಗರ್‌ಮಾತಾ ಮಾಲಿನ್ಯ ತಡೆ ಸಮಿತಿ’ಯು ಪರ್ವತದ ಸ್ವಚ್ಛತೆಯ ಕಾರ್ಯ ಮಾಡುತ್ತಿದೆ. 2019ರಲ್ಲಿ ನೇಪಾಳ ಸರ್ಕಾರವು ಚಾರಣಿಗರ ಹಾಗೂ ಸೈನಿಕರ ತಂಡವನ್ನು ರಚಿಸಿ ಪ್ರತಿ ವರ್ಷವು ಸ್ವಚ್ಛತೆ ಕೈಗೊಳ್ಳುವ ಕಾರ್ಯವನ್ನು ಆರಂಭಿಸಿದೆ. ಇದರ ಭಾಗವಾಗಿ ಈ ವರ್ಷವೂ ತಂಡವನ್ನು ಕಳುಹಿಸಲಾಗಿತ್ತು.

ಚಾರಣಿಗ ಅಂಗ ಬಾಬು ಶೆಪ್ರಾ ಅವರ ನೇತೃತ್ವದಲ್ಲಿ ತಂಡವು ಈ ಬಾರಿ ಸ್ವಚ್ಛತೆ ಕಾರ್ಯಕೈಗೊಂಡಿದೆ. ‘ಚಾರಣ ಮಾರ್ಗದ ದಕ್ಷಿಣ ಕಣಿವೆ ಕ್ಯಾಂಪ್‌ನಲ್ಲಿ ಸುಮಾರು 40–50 ಟನ್‌ಗಳಷ್ಟು ಕಸ ಇರಬಹುದು’ ಎಂದು ಅಂಗ ಅಂದಾಜಿಸಿದ್ದಾರೆ. ‘ಹಳೆಯ ಟೆಂಟ್‌ಗಳು, ಆಹಾರ ಪೊಟ್ಟಣಗಳು, ಬೆಂಕಿ ಹೊತ್ತಿಸಲು ಬಳಸುವ ಗ್ಯಾಸ್‌ ಕ್ಯಾಟ್ರೇಜ್‌ಗಳು, ಆಮ್ಲಜನಕದ ಬಾಟಲಿಗಳು, ಹಗ್ಗಗಳನ್ನು ಚಾರಣಿಗರು ಇಲ್ಲಿಯೇ ಬಿಟ್ಟು ತೆರಳಿದ್ದಾರೆ’ ಎಂದರು ಅವರು ಮಾಹಿತಿ ನೀಡಿದರು.

1953ರಲ್ಲಿ ಎವರೆಸ್ಟ್‌ ಅನ್ನು ಮೊದಲ ಬಾರಿ ಏರಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಲಕ್ಷಾಂತರ ಮಂದಿ ಚಾರಣ ಮುಗಿಸಿದ್ದಾರೆ. ಹಾಗೆಯೇ ಕಸವನ್ನು ಇಲ್ಲಿಯೇ ಬಿಸಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನೇಪಾಳ ಸರ್ಕಾರವು ಚಾರಣಿಗರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈ ಕಾರಣದಿಂದ ಕಸದ ಪ್ರಮಾಣ ತುಸು ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಕಸ ವಾಪಾಸು ತರುವ ಕ್ರಮ: ಎವರೆಸ್ಟ್‌ ಪರ್ವತ ಏರುವ ಪ್ರತಿಯೊಬ್ಬರೂ ₹3.33 ಲಕ್ಷ ಠೇವಣಿ ಇಡಬೇಕು. ಒಂದು ವೇಳೆ ವ್ಯಕ್ತಿಯು ತಾನು ಸೃಷ್ಟಿಸುವ ಕಸವನ್ನು ವಾಪಸ್‌ ತಂದರೆ, ಆತನಿಗೆ ಈ ಠೇವಣಿ ಹಣವನ್ನು ವಾಪಾಸು ಮಾಡುವ ಕ್ರಮವನ್ನು ನೇಪಾಳ ಸರ್ಕಾರ 2014ರಲ್ಲಿ ಜಾರಿಗೊಳಿಸಿತ್ತು.

ಆಧಾರ: ಎಪಿ, ನ್ಯಾಷನಲ್‌ ಜಿಯೋಗ್ರಫಿಕ್‌, ನೇಪಾಳ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌

1957ರಲ್ಲಿ ಬಿಸಾಡಿದ ಕಸವೊಂದು ದೊರೆತಿದೆ. ಇದು ಟಾರ್ಚ್‌ಲೈಟ್‌ಗಾಗಿ ರಿಚಾರ್ಚ್‌ ಮಾಡುವ ಬ್ಯಾಟರಿಯಾಗಿತ್ತು ಸುಶೀಲ್‌ ಖಾಂಡ್ಗ ಮರುಬಳಕೆ ಕಸಗಳನ್ನು ನಿರ್ವಹಿಸುವ ಸಂಸ್ಥೆ
‘ಅಗ್ನಿ ವೆಂಚರ್ಸ್‌’ನ ಸದಸ್ಯ

ನಾಲ್ಕು ಶವ ಒಂದು ಅಸ್ಥಿಪಂಜರ!

ಕಸದ ರಾಶಿಯ ಜೊತೆಗೆ ಈ ತಂಡವು ನಾಲ್ಕು ಶವ ಹಾಗೂ ಒಂದು ಅಸ್ಥಿಪಂಜರವನ್ನು ಹೊರತೆಗೆದಿದೆ. ‘ದಕ್ಷಿಣ ಕಣಿವೆಯಲ್ಲಿ ಒಂದು ಮೃತದೇಹವನ್ನು ಹೊರತೆಗೆಯಲು ಎರಡು ದಿನ ಬೇಕಾಯಿತು. ಶವವು ನಿಂತ ಸ್ಥಿತಿಯಲ್ಲಿತ್ತು ಮತ್ತು ಅದು ಹಿಮಗಡ್ಡೆಯಂತಾಗಿತ್ತು. ಇನ್ನೊಂದು ಮೃತದೇಹವು 8400 ಮೀಟರ್‌ ಎತ್ತರದಲ್ಲಿ ದೊರಕಿತು. ಈ ಶವವನ್ನು ಹೊರತೆಗೆಯಲು ಮತ್ತು ಕ್ಯಾಂಪ್‌ 2ಕ್ಕೆ ತರಲು 18 ತಾಸುಗಳು ಬೇಕಾದವು’ ಎಂದು ಚಾರಣಿಗ ಅಂಗ ತಿಳಿಸಿದ್ದಾರೆ.

ಮಂಜು ಗಡ್ಡೆ, ಹವಾಮಾನ ವೈಪರಿತ್ಯ ಮತ್ತು ಆರೋಗ್ಯ

‘ಈಗ ದೊರಕಿರುವ ಕಸವು  ಈ ಹಿಂದೆ ಚಾರಣಗರದಿಂದ ಉಂಟಾದ ಕಸ’ ಎಂದು ಚಾರಣಿಗ ಅಂಗ ಹೇಳಿದ್ದಾರೆ. 1957ರ ಕಸವು ಈಗ ಹೇಗೆ ದೊರೆಯಿತು ಎಂಬ ಪ್ರಶ್ನೆಯು ಮೂಡುವುದು ಸಹಜ. ಇದಕ್ಕೆ ಕಾರಣ ಹವಾಮಾನ ವೈಪರಿತ್ಯ. ಉಷ್ಣಾಂಶ ಏರಿಕೆಯಿಂದಾಗಿ ಹಿಮ ಕರಗುತ್ತಿದೆ. ಈ ಕಾರಣದಿಂದಾಗಿ ಹಿಮದ ಒಳಗೆ ಹಲವು ದಶಕಗಳಿಂದ ಹುದುಗಿದ್ದ ಶವಗಳು ಕಸಗಳು ಈಗ ಕಾಣುತ್ತಿವೆ. ಇಂಥ ಕಸಗಳು ಪರ್ವತದ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿವೆ. ಚಾರಣವು ಹಲವು ದಿನಗಳವರೆಗೆ ನಡೆಯುವುದರಿಂದ ಮಾನವ ತ್ಯಾಜ್ಯವು ಕಸದ ರಾಶಿಗಳೊಂದಿಗೆ ಸೇರುತ್ತಿವೆ. ಒಂದೆಡೆ ಹಿಮ ಕರಗುತ್ತಿದ್ದರೆ ಈ ತ್ಯಾಜ್ಯಗಳು ಅವುಗಳೊಂದಿಗೆ ನದಿ ಸೇರುತ್ತಿವೆ. ಇದು ಸ್ಥಳೀಯ ಜಲಮೂಲಕ್ಕೆ ತೊಡಕಾಗಿದ್ದು ಹಲವು ರೋಗಗಳಿಗೆ ಮೂಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.