ವಾಷಿಂಗ್ಟನ್: ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪವುಳ್ಳ ತಹಾವ್ವುರ್ ರಾಣಾ, ಭಾರತದ ಸುಪರ್ದಿಗೆ ತನ್ನನ್ನು ಒಪ್ಪಿಸದಂತೆ ಕೋರಿ ಅಮೆರಿಕದ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾನೆ.
ಪಾಕಿಸ್ತಾನ ಮೂಲದ ಕೆನಡಾದ ಪ್ರಜೆಯಾದ ಈತನ ಮೇಲ್ಮನವಿಗಳನ್ನು ಈಗಾಗಲೇ ಕೆಳಹಂತದ ಕೋರ್ಟ್‌ಗಳು, ಫೆಡರಲ್ ಕೋರ್ಟ್ ತಿರಸ್ಕೃರಿಸಿದೆ. ಈತನನ್ನು ಭಾರತಕ್ಕೆ ಒಪ್ಪಿಸಲು ವಿದೇಶಾಂಗ ಇಲಾಖೆ ನಿರ್ಧರಿಸಿತ್ತು. ಇದನ್ನು ಈತ ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿರುವುದು ಈತನ ಕಡೇ ಯತ್ನವಾಗಿದೆ.
ಮುಂಬೈನ 2008ರ ಭಯೋತ್ಪಾದಕರ ದಾಳಿ ಕೃತ್ಯದ ಸಂಚು ನಡೆಸಿದ್ದ ಎಂಬ ಆರೋಪದ ಪ್ರಕರಣದಲ್ಲಿ ಇಲಿನಾಯ್ಸ್‌ನ ಉತ್ತರ ಜಿಲ್ಲಾ ಕೋರ್ಟ್ ಖುಲಾಸೆಗೊಳಿಸಿದೆ ಎಂಬುದು ಈತನ ವಾದ. ಇದನ್ನು ಕೆಳಹಂತದ ಕೋರ್ಟ್‌ಗಳು ಈಗಾಗಲೇ ತಳ್ಳಿಹಾಕಿವೆ. ಕಡೆಯದಾಗಿ ಈತನ ಅರ್ಜಿಯನ್ನು ಸ್ಯಾನ್ ಫ್ರಾನ್ಸಿಸ್ಕೊದ ನಾರ್ಥ್ ಸರ್ಕ್ಯೂಟ್ ಕೋರ್ಟ್ ತಿರಸ್ಕರಿಸಿತ್ತು.
ನಾರ್ಥ್ ಸರ್ಕ್ಯೂಟ್‌ನ ಮೇಲ್ಮನವಿ ಅರ್ಜಿಗಳ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಸುಪ್ರೀಂಗೆ ಈಗ ಮನವಿ ಮಾಡಿದ್ದಾನೆ.
ಷಿಕಾಗೊ ಪ್ರಕರಣದಲ್ಲಿ ಕೋರ್ಟ್‌ನ ಆದೇಶವನ್ನು ಆಧರಿಸಿ ಈಗ ಭಾರತ ಆತನನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ಕೋರಬಹುದಾಗಿದೆ ಎಂದು ಹೇಳಲಾಗಿದೆ. ಒಂದೇ ಪ್ರಕರಣ ಕುರಿತು ಎರಡು ಬಾರಿ ವಿಚಾರಣೆ ಸಾಧ್ಯವಿಲ್ಲದ ಕಾರಣ ಈತನನ್ನು ಭಾರತದ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಮೂಲದ ಅಮೆರಿಕನ್ ಆಗಿರುವ, ಲಷ್ಕರ್ ಎ ತೊಯಬಾ ಸಂಘಟನೆಯ ಸದಸ್ಯ ಡೇವಿಡ್ ಕೋಲ್ಮನ್ ಹೆಡ್ಲೆ ಜೊತೆಗೆ ರಾಣಾ ಗುರುತಿಸಿಕೊಂಡಿದ್ದು, ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ ಎಂಬ ಆರೋಪ ಈತನ ಮೇಲಿದೆ.
2008ರ ಮುಂಬೈ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರು ಮೃತಪಟ್ಟಿದ್ದರು. ಪಾಕ್ ಮೂಲದ 10 ಭಯೋತ್ಪಾದಕರು ಈ ಕೃತ್ಯ ಎಸಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.