ವಾಷಿಂಗ್ಟನ್:ವಿಶ್ವದಾದ್ಯಂತ ಮುಸ್ಲಿಮರು ಹಿಂಸಾಚಾರಗಳಿಗೆ ಗುರಿಯಾಗುತ್ತಿದ್ದಾರೆ. ಹಲವು ಸವಾಲುಗಳು ಹಾಗೂ ಬೆದರಿಕೆಗಳನ್ನು ಎದುರಿಸುತ್ತಿದ್ದರೂ ಮುಸ್ಲಿಮರು ಅಮೆರಿಕವನ್ನು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈದ್–ಉಲ್ ಫಿತ್ರ್ ಆಚರಣೆ ಪ್ರಯುಕ್ತ ಶ್ವೇತಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ರಾಯಭಾರಿಯಾಗಿ ಸೇವೆ ಸಲ್ಲಿಸಲು ಮುಸ್ಲಿಂ ವ್ಯಕ್ತಿಯೊಬ್ಬರನ್ನು ನೇಮಿಸಲಾಗಿದೆ’ ಎಂದು ಹೇಳಿದ್ದಾರೆ.
‘ವಿಶ್ವದಾದ್ಯಂತ ಮುಸ್ಲಿಮರನ್ನುಹಿಂಸಾಚಾರಕ್ಕೆ ಗುರಿಪಡಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತುಳಿತಕ್ಕೊಳಗಾದವರ ವಿರುದ್ಧ ಯಾರೂ ತಾರತಮ್ಯ ಮಾಡಬಾರದು. ಜೊತೆಗೆ ಮುಸ್ಲಿಮರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಬಾರದು’ ಎಂದು ಬೈಡನ್ ಹೇಳಿದ್ದಾರೆ.
‘ರೋಹಿಂಗ್ಯಾಗಳು ಸೇರಿದಂತೆ ಹಿಂಸೆ, ಸಂಘರ್ಷಗಳನ್ನು ಎದುರಿಸುತ್ತಿರುವ ಎಲ್ಲರನ್ನು ಒಳಗೊಂಡಂತೆ ಈ ಪವಿತ್ರ ದಿನವನ್ನು ಆಚರಿಸಲು ಸಾಧ್ಯವಾಗದ ಎಲ್ಲರನ್ನು ನಾವು ಸ್ಮರಿಸುತ್ತೇವೆ’ ಎಂದು ಬೈಡನ್ ಹೇಳಿದ್ದಾರೆ.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೂ ಈದ್–ಉಲ್ ಫಿತ್ರ್ ಅಂಗವಾಗಿ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.