ADVERTISEMENT

ಇಥಿಯೋಪಿಯಾ ವಿಮಾನ ದುರಂತ: ಆ ಎರಡು ನಿಮಿಷದಲ್ಲೇನಾಯ್ತು ಗೊತ್ತಾ?

ಏಜೆನ್ಸೀಸ್
Published 11 ಮಾರ್ಚ್ 2019, 10:22 IST
Last Updated 11 ಮಾರ್ಚ್ 2019, 10:22 IST
ಭಾನುವಾರ ಬೆಳಿಗ್ಗೆ ಪತನಗೊಂಡ ಇಥಿಯೋಪಿಯನ್ ಏರ್‌ಲೈನ್ಸ್‌ನ ‘ಇಟಿ 302’ ವಿಮಾನದ ಅವಶೇಷಗಳು
ಭಾನುವಾರ ಬೆಳಿಗ್ಗೆ ಪತನಗೊಂಡ ಇಥಿಯೋಪಿಯನ್ ಏರ್‌ಲೈನ್ಸ್‌ನ ‘ಇಟಿ 302’ ವಿಮಾನದ ಅವಶೇಷಗಳು   

ನೈರೋಬಿ: ಇಥಿಯೋಪಿಯಾದ ಆಡಿಸ್ ಅಬಬಾದಿಂದಬೋಯಿಂಗ್–737 ‘ಇಟಿ 302’ ವಿಮಾನ ಹೊರಡುವುದಕ್ಕೆ ಇನ್ನೇನು ಕೆಲವೇ ಕ್ಷಣ ಬಾಕಿ ಇತ್ತು. ಗ್ರೀಕ್‌ನಆಂಟೋನಿಸ್ ಮಾವೋಪೌಲೋಸ್ ಎಂಬುವವರು ಆತುರಾತುರವಾಗಿ ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ ಬಳಿ ಧಾವಿಸಿದರು. ಆದರೆ, ಅವರನ್ನು ಒಳ ಪ್ರವೇಶಿಸದಂತೆ ವಿಮಾನ ನಿಲ್ದಾಣದ ಸಿಬ್ಬಂದಿ ತಡೆದರು. ಕಾರಣವಿಷ್ಟೆ, ಅವರು 2 ನಿಮಿಷ ತಡವಾಗಿ ಗೇಟ್ ಬಳಿ ಬಂದಿದ್ದರು.

ಇದಾಗಿ ಕೆಲ ನಿಮಿಷಗಳಲ್ಲಿ ಆ ವಿಮಾನವು ಟೇಕಾಫ್ ಆಯಿತು. ಪ್ರಯಾಣಿಸಲು ಅವಕಾಶ ನೀಡದ ಸಿಬ್ಬಂದಿ ಕ್ರಮವನ್ನು ಆಂಟೋನಿಸ್ ಪ್ರತಿಭಟಿಸಿದರು. ಕೊನೆಗೆ ಅವರನ್ನು ಸಮಾಧಾನಪಡಿಸಿದ ಸಿಬ್ಬಂದಿ ಬೇರೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಅಷ್ಟರಲ್ಲಿ, ಟೇಕಾಫ್ ಆಗಿ ಕೆಲ ನಿಮಿಷಗಳಲ್ಲೇ ಬೋಯಿಂಗ್–737 ‘ಇಟಿ 302’ ವಿಮಾನ ಪತನವಾಗಿದೆ ಎಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.

‘ಮೈ ಲಕ್ಕಿ ಡೇ’:ಘಟನೆ ಕುರಿತು‘ಮೈ ಲಕ್ಕಿ ಡೇ’ ಎಂಬ ಶೀರ್ಷಿಕೆಯಡಿಆಂಟೋನಿಸ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ‘ಇಂಟರ್‌ನ್ಯಾಷನಲ್ ಸಾಲಿಡ್ ವೇಸ್ಟ್ ಅಸೋಸಿಯೇಷನ್’ ಎಂಬ ಹೆಸರಿನ ಸ್ವಯಂಸೇವಾ ಸಂಸ್ಥೆಯೊಂದರ ಅಧ್ಯಕ್ಷರಾಗಿರುವ ಆಂಟೋನಿಸ್ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ದುರಂತಕ್ಕೀಡಾದವಿಮಾನದಲ್ಲಿ ಪ್ರಯಾಣಿಸಲು ಖರೀದಿಸಿದ್ದ ಟಿಕೆಟ್‌ನ ಚಿತ್ರ ಸಹಿತ ಅವರು ಫೇಸ್‌ಬುಕ್‌ನಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಆಂಟೋನಿಸ್ ಮಾವೋಪೌಲೋಸ್ ಖರೀದಿಸಿದ್ದ ಟಿಕೆಟ್‌ನ ಚಿತ್ರ

‘ಪ್ರತಿಭಟಿಸಬೇಡಿ, ಪ್ರಾರ್ಥಿಸಿ’:‘ದಯಮಾಡಿ ಪ್ರತಿಭಟಿಸಬೇಡಿ. ದೇವರನ್ನು ಪ್ರಾರ್ಥಿಸಿ. ಯಾಕೆಂದರೆ ಆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗದ್ದರಿಂದ ನಿಮ್ಮ ಪ್ರಾಣ ಉಳಿಯಿತು’ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದರು ಎಂಬುದಾಗಿಆಂಟೋನಿಸ್ ಬರೆದಿದ್ದಾರೆ.

ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ನ‘ಇಟಿ 302’ ವಿಮಾನಭಾನುವಾರ ಬೆಳಿಗ್ಗೆ ಪತನಗೊಂಡು,ಅದರಲ್ಲಿದ್ದನಾಲ್ವರು ಭಾರತೀಯರು ಸೇರಿ 157 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ 149 ಮಂದಿ ಪ್ರಯಾಣಿಕರು ಮತ್ತು 8 ಮಂದಿ ಸಿಬ್ಬಂದಿ ಇದ್ದರು.ಬೆಳಿಗ್ಗೆ 8.38ಕ್ಕೆ ಆಡಿಸ್ ಅಬಾಬಾದಿಂದ ಹೊರಟ ವಿಮಾನ 6 ನಿಮಿಷಗಳ ನಂತರ ಸಂಪರ್ಕ ಕಡಿಗೊಂಡಿದೆ. 60 ಕಿ.ಮೀ ದೂರದ ಬಯಲಿನಲ್ಲಿ ಪತನವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.