ಯಂಗೂನ್: ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ ಎಂದು ಸರ್ಕಾರಿ ಒಡೆತನದ ಸುದ್ದಿ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಕಳೆದ ವರ್ಷದ ಫೆಬ್ರುವರಿಯಲ್ಲಿ ದಂಗೆಯ ನೇತೃತ್ವ ವಹಿಸಿದ್ದ ಸೇನಾ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರು ತಮ್ಮ ಅಧಿಕಾರವಧಿಯನ್ನು ಇನ್ನೂ 6 ತಿಂಗಳ ವರೆಗೆ ವಿಸ್ತರಿಸುವಂತೆ ಮಿಲಿಟರಿ ಸರ್ಕಾರವನ್ನು ಕೋರಿದ್ದರು ಎಂದು ಮ್ಯಾನ್ಮಾರ್‌ನ ‘ಗ್ಲೋಬಲ್ ನ್ಯೂ ಲೈಟ್‘ ವರದಿ ಮಾಡಿದೆ.
ಮಿಲಿಟರಿ ಸರ್ಕಾರದ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಮಂಡಳಿಯ ಸದಸ್ಯರು ಒಮ್ಮತದಿಂದ ಪ್ರಸ್ತಾವನೆಯನ್ನು ಬೆಂಬಲಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.
ಕಳೆದ ವರ್ಷ ಫೆಬ್ರುವರಿಯಲ್ಲಿ ಆಂಗ್ ಸಾನ್ ಸೂಕಿ ಅವರ ಸರ್ಕಾರವನ್ನು ಕಿತ್ತೊಗೆದ ಸೇನೆಯು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿತ್ತು.
2023ರ ಆಗಸ್ಟ್ ವೇಳೆಗೆ ಚುನಾವಣೆಗಳನ್ನು ನಡೆಸಲಾಗುವುದು ಮತ್ತು ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗುವುದು ಎಂದು ಮಿಲಿಟರಿ ಸರ್ಕಾರ ಹಿಂದೆ ಹೇಳಿತ್ತು.
2020 ರ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ ಭಾರಿ ಅಕ್ರಮ ನಡೆಸಿದೆ ಎಂದು ಆರೋಪಿಸಿದ್ದ ಮಿಲಿಟರಿ ಸರ್ಕಾರವು, ದಂಗೆಯನ್ನು ಸಮರ್ಥಿಸಿಕೊಂಡಿತ್ತು. ಇದೇ ಕಾರಣ ನೀಡಿ ಚುನಾವಣಾ ಫಲಿತಾಂಶಗಳನ್ನೂ ರದ್ದುಗೊಳಿಸಿತ್ತು.
ಆದರೆ, ಚುನಾವಣೆಗಳು ಬಹುಮಟ್ಟಿಗೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿತ್ತು ಎಂದು ಅಂತಾರಾಷ್ಟ್ರೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದರು.
ದೇಶದ ಅಧಿಕಾರವನ್ನು ಕಸಿದ ಬಳಿಕ ಸೂಕಿಯವರನ್ನು ಬಂಧಿಸಲಾಯಿತು. 150 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಬಹುದಾದಷ್ಟು ಆರೋಪಗಳ ಪಟ್ಟಿಯನ್ನು ಅವರ ವಿರುದ್ಧ ಮಿಲಿಟರಿ ಸರ್ಕಾರ ಹೊರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.