ನೈಪಿತಾವ್: ಮ್ಯಾನ್ಮಾರ್‌ನಲ್ಲಿ ಸೇನೆಯು ಅಧಿಕಾರದ ಚುಕ್ಕಾಣಿ ಹಿಡಿದು ನಾಲ್ಕು ತಿಂಗಳು ಪೂರ್ಣಗೊಂಡಿದೆ. ಆದರೂ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಿ, ಶಾಂತಿ ಸ್ಥಾಪಿಸಲು ಸೇನೆಯು ವಿಫಲವಾಗಿದೆ.
ಫೆಬ್ರುವರಿ 1 ರಂದು ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಮ್ಯಾನ್ಮಾರ್ ಸೇನೆಯು ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆಂಗ್ ಸಾನ್ ಸೂಕಿ ಸೇರಿದಂತೆ ಇತರೆ ಹಿರಿಯ ನಾಯಕರನ್ನು ಬಂಧಿಸಿತು. ಇದನ್ನು ವಿರೋಧಿಸಿ ಈಗಲೂ ಪ್ರತಿಭಟನೆಗಳು ಮುಂದುವರಿದಿವೆ.
ಮ್ಯಾನ್ಮಾರ್‌ನ ದಕ್ಷಿಣ ಭಾಗದ ಲಾಂಗ್ ಲೊನ್‌ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಜನರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದಾರೆ. ಯಾಂಗೂನ್ ನಗರದ ಯುವ ಗುಂಪೊಂದು ಕಮಯುತ್ ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ನಡೆಸಿದೆ.
ಇನ್ನೊಂದೆಡೆ ಸೇನೆ ಮತ್ತು ಗಡಿ ಪ್ರದೇಶಗಳಲ್ಲಿರುವ ಬುಡಕಟ್ಟು ಅಲ್ಪಸಂಖ್ಯಾತ ಸೇನೆಯ ನಡುವಿನ ದಶಕಗಳ ಸಂಘರ್ಷವು ಇನ್ನಷ್ಟು ತೀವ್ರಗೊಂಡಿದೆ. ನಾಗರಿಕ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬುಡಕಟ್ಟು ಅಲ್ಪಸಂಖ್ಯಾತ ಸೇನೆಯು ಮ್ಯಾನ್ಮಾರ್‌ನ ಮಿಲಿಟರಿ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಸೇನೆಯು ವೈಮಾನಿಕ ದಾಳಿಯನ್ನು ನಡೆಸಿದೆ.
‘ಲೊಯಿಕಾವ್‌ನಿಂದ 14.5 ಕಿ.ಮೀ ದೂರದಲ್ಲಿರುವ ಡೆಮೋಸೊದಲ್ಲಿ ಸೇನೆಯ ಮೇಲೆ ದಾಳಿ ನಡೆಸಲಾಗಿದೆ. ಸೋಮವಾರ 50 ಸುತ್ತು ಮತ್ತು ಮಂಗಳವಾರ ಆರು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸೋಮವಾರ 80 ಸೈನಿಕರು ಮೃತಪಟ್ಟಿದ್ದಾರೆ’ ಎಂದು ಕಾಯ್ಹಾ ರಾಜ್ಯದಲ್ಲಿ ಸಕ್ರಿಯವಾಗಿರುವ ಕರೇನಿ ನ್ಯಾಷನಾಲಿಟೀಸ್ ಡಿಫೆನ್ಸ್ ಫೋರ್ಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿಲು ಮ್ಯಾನ್ಮಾರ್ ಸೇನೆಯು ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.