ADVERTISEMENT

6 ಲಕ್ಷ ರೋಹಿಂಗ್ಯಾ ಮುಸ್ಲಿಮರಿಗೆ ನರಮೇಧದ ಭೀತಿ

ಏಜೆನ್ಸೀಸ್
Published 16 ಸೆಪ್ಟೆಂಬರ್ 2019, 20:00 IST
Last Updated 16 ಸೆಪ್ಟೆಂಬರ್ 2019, 20:00 IST
   

ಯಾಂಗೂನ್: ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸ್ಲಿಮರು ಈಗಲೂ ನರಮೇಧದ ಭೀತಿ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳ ತಂಡ ಅಭಿಪ್ರಾಯಪಟ್ಟಿದೆ.

ರೋಹಿಂಗ್ಯಾ ಮುಸ್ಲಿಮರ ಸ್ಥಿತಿಗತಿ ಅಧ್ಯಯನ ನಡೆಸಲು ಮಾನವ ಹಕ್ಕುಗಳ ಮಂಡಳಿ ರಚಿಸಿರುವ ಸತ್ಯಶೋಧನಾ ಸಮಿತಿ, 2017ರಲ್ಲಿ ಸೇನೆ ನಡೆಸಿದ್ದ ಕಾರ್ಯಾಚರಣೆಯನ್ನು ನರಮೇಧ ಎಂದು ಬಣ್ಣಿಸಿತ್ತಲ್ಲದೇ, ಸೇನಾ ಮುಖ್ಯಸ್ಥ ಮಿಲ್‌ ಅಂಗ್‌ ಹೇಲಿಂಗ್‌ ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿತ್ತು.

ಹಳ್ಳಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ 7,40,000 ರೋಹಿಂಗ್ಯಾ ಮುಸ್ಲಿಮರು ವಲಸೆ ಹೋಗಿದ್ದಾರೆ. ಕೊಲೆ, ಅತ್ಯಾಚಾರ ಹಾಗೂ ಸಾಕಷ್ಟು ಕಿರುಕುಳ ನೀಡಿ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಕ್ಕೆ ಸೇರಿಸಲಾಗಿದೆ. ಅವರು ಈಗಲೂ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ADVERTISEMENT

ಆರು ಲಕ್ಷದಷ್ಟು ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನ ರಾಖಿನೆ ರಾಜ್ಯದಲ್ಲಿ ವಾಸವಿದ್ದಾರೆ ಎಂದು ವಿಶ್ವಸಂಸ್ಥೆಯ ತಂಡ ಉಲ್ಲೇಖ ಮಾಡಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ ಎಂದೂ ಹೇಳಿದೆ.

ಸೇನೆಯು ಜನಾಂಗೀಯ ಹತ್ಯೆಯ ಉದ್ದೇಶ ಹೊಂದಿದೆ ಎಂದು ತಜ್ಞರ ತಂಡ ಹೇಳಿದ್ದು, ಈ ಕುರಿತ ತಮ್ಮ ಅಂತಿಮ ವರದಿಯನ್ನು ಜಿನಿವಾದಲ್ಲಿ ಮಂಗಳವಾರ ಸಲ್ಲಿಸಲಿದೆ.

‘ಮ್ಯಾನ್ಮಾರ್‌ ತಪ್ಪುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಾಕ್ಷಿಗಳ ನಾಶ ಮಾಡುವ ಕೆಲಸದಲ್ಲಿ ನಿರತವಾಗಿದ್ದು ತನಿಖೆಗೆ ಅಸಹಕಾರ ನೀಡಿದೆ. ರೋಹಿಂಗ್ಯಾಗಳನ್ನು ಹೊರಹಾಕಿ ಕಟ್ಟಡಗಳನ್ನು ಧ್ವಂಸ ಮಾಡುವ, ಭೂಮಿ ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಆದರೆ, ಈ ವರದಿಯಲ್ಲಿನ ಅಂಶಗಳನ್ನು ಮ್ಯಾನ್ಮಾರ್‌ ಸೇನಾ ವಕ್ತಾರ ಜಾವ್‌ ಮಿನ್‌ ತುನ್ ತಿರಸ್ಕರಿಸಿದ್ದು, ಏಕಪಕ್ಷೀಯವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.