ಬೀಜಿಂಗ್: ಕೋವಿಡ್ 19 ಬಳಿಕ ಚೀನಾದಲ್ಲಿ ಇನ್ನೂ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಲೇ ಇದೆ. ಇದೀಗ ಹೊಸದಾಗಿ ಶಿಕ್ಷಣ ಸಂಸ್ಥೆಗಳ ಮೂಲಕ ನಿಗೂಢ ನ್ಯುಮೋನಿಯಾ ಕಾಯಿಲೆ ಏಕಾಏಕಿ ವ್ಯಾಪಿಸುತ್ತಿದೆ. ಇದರಿಂದಾಗಿ ದೇಶದಲ್ಲಿ ನೂರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಉಸಿರಾಟದ ಸೋಂಕು ಬಂದರೆ ಶೀತಜ್ವರದ ಸೋಂಕು, ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ ಸೋಂಕು ದೇಹವನ್ನು ವ್ಯಾಪಿಸುತ್ತದೆ. ಈ ಕಾಯಿಲೆ ಸಣ್ಣ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಕೊರೊನಾ ಸೋಂಕಿಗೂ ಕಾರಣವಾಗಲಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಉಸಿರಾಟದ ವ್ಯವಸ್ಥೆಯಲ್ಲಿ ಸಣ್ಣ ಪ್ರಮಾಣದ ಸೋಂಕು ಉಂಟುಮಾಡುತ್ತದೆ. ಆದರೆ ಇದೆ ಬ್ಯಾಕ್ಟೀರಿಯಾಗಳು ಕೆಲವೊಮ್ಮೆ ಗಂಭೀರ ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು ಆಗ ಸೂಕ್ತ ಚಿಕಿತ್ಸೆ ಪಡೆಯಲೇಬೇಕು ಎನ್ನುತ್ತದೆ ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ.
ಬೀಜಿಂಗ್‌ನಲ್ಲಿ ಚಳಿಗಾಲ ಆರಂಭವಾಗಿದೆ. ಹೀಗಾಗಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಬಹುದು ಎನ್ನುವುದು ಅಲ್ಲಿಯ ತಜ್ಞರ ಅಭಿಪ್ರಾಯ.
ಈಗ ಉಲ್ಬಣಗೊಂಡಿರುವ ಉಸಿರಾಟದ ಸಮಸ್ಯೆಯಿಂದ ಬೀಜಿಂಗ್ ಮತ್ತು ಲಿಯಾನಿಂಗ್ ಪ್ರದೇಶದ ಆಸ್ಪತ್ರೆಗೆ ನೂರಾರು ಮಕ್ಕಳು ದಾಖಲಾಗಿದ್ದಾರೆ. ಸೋಂಕಿನಿಂದ ದಾಖಲಾಗುತ್ತಿರವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದ್ದು ಆಸ್ಪತ್ರೆಗಳು ತುಂಬಿತುಳುಕುತ್ತಿವೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಸರ್ಕಾರದಿಂದ ಉಲ್ಬಣಗೊಂಡಿರುವ ಶ್ವಾಸಕೋಶದ ಕಾಯಿಲೆ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದೆ. ಅಲ್ಲದೆ, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಚೀನಾದ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.