ವಾಷಿಂಗ್ಟನ್: ಪ್ರಧಾನಿ ಮೋದಿ ಹಾಗೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಭೇಟಿಯಾದರು. ಈ ಸಂದರ್ಭದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರದ ಕುರಿತು ಚರ್ಚೆ ನಡೆಸಲಾಯಿತು ಎಂದು ಮಾಧ್ಯಮಗಳಿಗೆ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಹಿತಿ ನೀಡಿದರು.
ತಾಲಿಬಾನ್‌ಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೃಂಗ್ಲಾ, 'ಉಭಯ ನಾಯಕರ ನಡುವೆ ನಡೆದ ಚರ್ಚೆಯಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ, ಅಲ್ಲಿ ಭಯೋತ್ಪಾದಕ ಸಂಘಟನೆಗಳು ಕ್ರಿಯಾಶೀಲವಾಗಿವೆ ಎಂಬುದನ್ನು ಹ್ಯಾರಿಸ್ ಒಪ್ಪಿಕೊಂಡಿದ್ದಾರೆ' ಎಂದು ತಿಳಿಸಿದರು.
'ಈ ಸಂಘಟನೆಗಳಿಂದ ಅಮೆರಿಕ ಹಾಗೂ ಭಾರತದ ಭದ್ರತೆಯ ಮೇಲೆ ಯಾವುದೇ ಪರಿಣಾಮ ಉಂಟಾಗದ ಹಾಗೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಹ್ಯಾರಿಸ್ ತಾಕೀತು ಮಾಡಿದ್ದಾರೆ' ಎಂದು ಶೃಂಗ್ಲಾ ಹೇಳಿದರು.
'ಭಾರತವು ಹಲವು ದಶಕಗಳಿಂದ ಭಯೋತ್ಪಾದನೆಗೆ ಬಲಿಪಶುವಾಗಿದೆ. ಅಂತಹ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ. ಇದನ್ನು ನಿಯಂತ್ರಿಸುವ ಮತ್ತು ನಿಕಟವಾಗಿ ಮೇಲ್ವಿಚಾರಣೆ ನಡೆಸುವ ಅಗತ್ಯತೆಯ ಕುರಿತು ಮೋದಿ ಹೇಳಿದ್ದಾರೆ. ಇದಕ್ಕೆ ಹ್ಯಾರಿಸ್ ಒಪ್ಪಿಗೆ ನೀಡಿದ್ದಾರೆ' ಎಂದೂ ಶೃಂಗ್ಲಾ ತಿಳಿಸಿದರು.
ಈ ಬಾರಿ ಅಮೆರಿಕದ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗಲು ಮೋದಿ ಅವರು ವಾಷಿಂಗ್ಟನ್‌ಗೆ ಬಂದಿದ್ದಾರೆ.
ಇವುಗಳನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.